ಮಂಗಳೂರು, ಮೇ.7(DaijiworldNews/AA): ಮಂಗಳಾ ಬ್ಯಾಡ್ಮಿಂಟನ್ ಅಸೋಸಿ ಯೇಶನ್ ಸಂಸ್ಥೆಯ ವತಿಯಿಂದ 'ಮಂಗಳಾ ಕಪ್ 2024' ರಾಷ್ಟ್ರಮಟ್ಟದ ಓಪನ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಮೇ10ರಿಂದ 12ರವರೆಗೆ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸುಪ್ರೀತ್ ಆಳ್ವ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 10ರಂದು ಬೆಳಗ್ಗೆ 8 ಗಂಟೆಗೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಪಂದ್ಯಾಟದಲ್ಲಿ ಶಾಸಕ ವೇದವ್ಯಾಸ ಕಾಮತ್, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಯುವ ಸಬಲೀಕರಣ ಮತ್ತು ಕ್ರೀಡಾ ಉಪನಿರ್ದೇಶಕ ಪ್ರದೀಪ್ ಡಿಸೋಜ, ಶ್ರೀದೇವಿ ಗ್ರೂಪ್ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಮೋಟಾರು ಸ್ಪೋರ್ಟ್ಸ್ನ ಅಶ್ವಿನ್ ನಾಯಕ್ ಉಪಸ್ಥಿತರಿರಲಿದ್ದಾರೆ. ಮೇ 12ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಮೇಯರ್ ಸುಧೀರ್ ಶೆಟ್ಟಿ, ಡಾ.ಪ್ರಶಾಂತ್, ಮೋಹನ್ ಬೆಂಗ್ರೆ, ಕಾರ್ಪೊರೇಟರ್ಗಳಾದ ವಿನಯರಾಜ್, ಸಂಧ್ಯಾ ಮೋಹನ್, ದಿನೇಶ್ ಕುಂದರ್ ಉಪಸ್ಥಿತರಿರುವರು ಎಂದರು.
ಮಂಗಳಾ ಕಪ್ ಆಯೋಜನ ಸಮಿತಿ ಅಧ್ಯಕ್ಷ ಟೆರೆನ್ಸ್ ಅಜಯ್ ಮಾತನಾಡಿ, 3 ದಿನಗಳ ಪಂದ್ಯಾಟದಲ್ಲಿ ಪುರುಷರ, ಮಹಿಳೆಯರ ಸಿಂಗಲ್ಸ್-ಡಬಲ್ಸ್, ಮಿಕ್ ಡ್ ಡಬಲ್ಸ್ 30, 40 ಮತ್ತು 50 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ ಪಂದ್ಯಾಟಗಳು ನಡೆಯಲಿವೆ. ಪಂದ್ಯಾಟದ ಒಟ್ಟು ಬಹುಮಾನ ಮೊತ್ತ 5.83 ಲಕ್ಷ ರೂ. ಆಗಿದೆ. ಈ ಪಂದ್ಯಾಟದಲ್ಲಿ ಕರ್ನಾಟಕ, ಕೇರಳ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ದೀಪಕ್ ಕುಮಾರ್, ಖಜಾಂಚಿ ಲಕ್ಷ್ಮೀ ಪಿ. ಸುವರ್ಣ, ಅಭಿವೃದ್ಧಿ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಸಂಘಟನ ಕಾವ್ಯದರ್ಶಿ ಸಿ.ಎಸ್. ಭಂಡಾರಿ ಉಪಸ್ಥಿತರಿದ್ದರು.