ಬೈಂದೂರು, ಮೇ.7(DaijiworldNews/AA): ನಮ್ಮ ಕಲ್ಪನೆ ಇರುವುದು ಒಂದು ಲಕ್ಷ ಲೀಡು ನೀಡಿ ಮೋದಿಯವರನ್ನು ಬೈಂದೂರಿಗೆ ಕರೆತರುವುದು. ಇದಕ್ಕೆ ಪೂರಕವಾಗಿ ಇಡೀ ಕ್ಷೇತ್ರ ಹಾಗೂ ಕಾರ್ಯಕರ್ತರು ಉತ್ತಮ ಹೋರಾಟ ನೀಡಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾರರು ಪ್ರಭುದ್ಧರು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದ್ದಾರೆ.
ಕಂಚಿಕ ಅನು ಶಾಲೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗಾಗಿ ನಾವು ನೀಡಿದ ಭರವಸೆಗಳ ಕುರಿತು ಜನರ ಸ್ಪಂದನೆ ಉತ್ತಮವಾಗಿದೆ. ಬಹುತೇಕ ಮತದಾನ ಕೇಂದ್ರಗಳಲ್ಲಿ ಪ್ರಥಮ ಮತ ಚಲಾಯಿಸಲು ತಾಯಂದಿರು ನಿಂತಿದ್ದಾರೆ. ನವದುರ್ಗೆರ ಮತದಾನ ಕಲ್ಪನೆಗೆ ಮತದಾರರಿಂದ ಉತ್ತಮ ಸ್ಪಂದನೆ ಇದೆ. ಹಿಂದೆ ಎಂಎಲ್ಎ ಮತ್ತು ಎಂಪಿ ಚುನಾವಣೆ ಒಟ್ಟಿಗೆ ಬಂದಾಗ ಕೂಡ ಬೈಂದೂರಿನ ಜನರು ಚಿಂತನೆ ಮಾಡಿ ಮತ ಹಾಕಿದವರು ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿಯ ಕನಸು ಹೊರತಾಗಿ ಬರೀ ರಾಜಕೀಯದ ಚಿಂತನೆ ಇಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ಚಿಂತನೆ ಮಾಡುವವರು ನಾವು ಅದಕ್ಕೆ ಪೂರಕವಾಗಿ ಕಣಕ್ಕಿಳಿದವರು ನಾವು. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡ ತಮ್ಮ ಕ್ಷೇತ್ರದಲ್ಲಿ ಕೊಲ್ಲೂರು ಕಾರ್ಡ ಮಾದರಿ ಅಳವಡಿಸುವ ಬಗ್ಗೆ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕೂಡ ಕೊಲ್ಲೂರು ಕಾರಿಡಾರ್ ಶತಸಿದ್ಧ ಎಂದಿದ್ದಾರೆ ಎಂದು ಹೇಳಿದರು.
ನಮ್ಮ ನಾಯಕರುಗಳ ಸಹಕಾರ ಸಹಾಯ ಇರುವಾಗ ನಮ್ಮ ಕಲ್ಪನೆಗಳು ಕಾರ್ಯರೂಪಕ್ಕೆ ಬರುವುದು ಖಂಡಿತಾ. ಎಂಎಲ್ಎ ಚುನಾವಣೆ ವೇಳೆ ನಾನು ಕ್ಷೇತ್ರಕ್ಕೆ ಹೊಸಬ, ಆದರೆ ಅಭಿವೃದ್ಧಿಯ ಕನಸಿತ್ತು. ಸಮೃದ್ಧ ಬೈಂದೂರಿನ ಕಲ್ಪನೆಯಲ್ಲಿ ಚುನಾವಣಾ ಕಣಕ್ಕೆ ಇಳಿದವರು ನಾವು. ಅದೇ ಸ್ಪಂದನೆ ಇಂದಿಗೂ ಇದೆ ಜನರಿಗೆ ಸ್ಪಷ್ಟತೆ ಇದೆ. ಸರಕಾರದಿಂದ ಅನುದಾನಗಳು ಇಲ್ಲ ಎನ್ನುವುದನ್ನು ಬಿಟ್ಟರೆ ಕ್ಷೇತ್ರದ ಬಗ್ಗೆ ಉತ್ತಮ ಅಭಿರುಚಿ ಇದೆ ಎಂದರು.