ಮಂಗಳೂರು, ಮೇ.6(DaijiworldNews/AA): ಬಜ್ಪೆ ಪಟ್ಟಣ ಪಂಚಾಯಿತಿಯಿಂದ ಮೂರು ಲೋಡ್ ತ್ಯಾಜ್ಯವನ್ನು ವಿಲೇವಾರಿ ಮಾಡಲು ಪಚ್ಚನಾಡಿ ಡಂಪಿಂಗ್ ಯಾರ್ಡ್ಗೆ ತರಲಾಗಿದೆ. ಈ ವೇಳೆ ನಗರದ ಹೊರವಲಯದ ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಸುರಿಯುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಚ್ಚನಾಡಿ ನಿವಾಸಿಗಳು ತಮ್ಮ ಪ್ರದೇಶದಲ್ಲಿ ನಿರಂತರವಾಗಿ ನಗರದ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಬೇಸತ್ತಿದ್ದಾರೆ. ಹಾಗೇ ಸ್ಥಳೀಯ ನಿವಾಸಿಗಳು ನಗರದ ಹೊರವಲಯದಿಂದ ಪಚ್ಚನಾಡಿಗೆ ತ್ಯಾಜ್ಯವನ್ನು ತರುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ತ್ಯಾಜ್ಯ ವಿಲೇವಾರಿಗೆ ಅಧಿಕಾರ ನೀಡುವವರು ತಮ್ಮ ಸ್ವಂತ ನಿವಾಸದ ಸಮೀಪವೇ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳೀಯರ ವಿರೋಧದ ನಡುವೆಯೂ ತಹಶೀಲ್ದಾರ್ ಅವರು ಬಜ್ಪೆ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ಹೊಲದಲ್ಲಿ ಸುರಿಯಲು ಮುಂದಾಗಿದ್ದಾರೆ. ಈ ಹಿನ್ನೆಲೆ ಬಜ್ಪೆ ಪಂಚಾಯತ್ ಸಿಬ್ಬಂದಿ ವಿರುದ್ಧವೂ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಷಯ ತಿಳಿದು ಮಂಗಳೂರು ತಹಶೀಲ್ದಾರ್ ಹಾಗೂ ಬಜ್ಪೆ ಪಂಚಾಯತ್ ಸಿಇಒ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಜ್ಪೆ ಪಂಚಾಯತ್ನ ತ್ಯಾಜ್ಯವನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಅನುಮತಿಯಿಲ್ಲದೆ ಸುರಿದಿರುವುದು ಪತ್ತೆಯಾಗಿದ್ದು, ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.