ಬಂಟ್ವಾಳ, ಮೇ06(Daijiworld News/SS): ಕರಾವಳಿಯಲ್ಲಿ ಗತ ಕಾಲದ ಇತಿಹಾಸವನ್ನು ಸಾರುವ ಭವ್ಯವಾದ ಗರಡಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ನಿರ್ಮಾಣಗೊಳ್ಳುತ್ತಿದ್ದು, ವೈಭವದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ಕ್ಷೇತ್ರದಲ್ಲಿ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದಲ್ಲಿರುವ ಕಕ್ಯಪದವು ಎಂಬಲ್ಲಿ ಈ ಗರಡಿ ನಿರ್ಮಾಣವಾಗುತ್ತಿದ್ದು, ಮೇ 17ರಿಂದ ಮೇ 22ರವರೆಗೆ ಬ್ರಹ್ಮಕಲಶೋತ್ಸವದ ವೈದಿಕ ವಿಧಿ - ವಿಧಾನಗಳು ನಡೆಯಲಿದೆ. ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಕಕ್ಯಪದವು ಗರಡಿ ಕ್ಷೇತ್ರದ ಪುನರ್ನಿಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಅಂದಾಜು 3 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಊರಪರವೂರ ಭಕ್ತವೃಂದ ಪುನರ್ ನಿರ್ಮಾಣದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ.
ಕಕ್ಯಪದವು ಗರಡಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು, ಉಳಿ, ಮಣಿನಾಲ್ಕೂರು, ಸರಪಾಡಿ, ಕಾವಳಮೂಡೂರು, ದೇವಸ್ಯಪಡೂರು, ತೆಂಕಕಜೆಕಾರು, ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮಗಳ ವ್ಯಾಪ್ತಿಯ ಭಕ್ತರ ಸಹಿತ ಊರಪರವೂರ ಅಪಾರ ಭಕ್ತಾದಿಗಳ ಆರಾಧನಾಲಯವಾಗಿ ಪ್ರಸಿದ್ಧಿ ಪಡೆದಿದೆ.
ಕ್ಷೇತ್ರದಲ್ಲಿ ಬೆರ್ಮೆರ್, ಕೋಟಿ ಚೆನ್ನಯರ ಜತೆಯಲ್ಲಿ ಪ್ರಧಾನ ಶಕ್ತಿಗಳಾಗಿ ಗ್ರಾಮದೈವ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಲು, ಮಾಯಂದಾಲ್ ನೆಲೆಯಾಗಿ ಭಕ್ತರನ್ನು ಹರಸುತ್ತಿದ್ದಾರೆ.
ತಾಂತ್ರಿಕ ತಜ್ಞ ಪ್ರಮಲ್ ಕುಮಾರ್ ಕಾರ್ಕಳ ಮತ್ತು ವಾಸ್ತುಶಿಲ್ಪಿ ಸದಾಶಿವ ಗುಡಿಗಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಗರಡಿ ಕ್ಷೇತ್ರ ಭವ್ಯವವಾಗಿ ನಿರ್ಮಾಣವಾಗುತ್ತಿದ್ದು, ಮೇ 17ರಿಂದ ಪ್ರತಿಷ್ಠೆ, ಬ್ರಹ್ಮಕಲಾಶಾಧಿಗಳು ವೈಭವದಿಂದ ನಡೆಯಲಿದೆ.