ಉಳ್ಳಾಲ, ಮೇ.6(DaijiworldNews/AA): ಕಾರೊಂದು ವಿದ್ಯುತ್ ಕಂಬಕ್ಕೆ ಬಡಿದು ರಸ್ತೆ ಬದಿಯಲ್ಲಿ ಹಾಕಿದ್ದ ಕಬ್ಬಿಣ ತಡೆಬೇಲಿಗೆ ಸಿಲುಕಿ ತಲೆಕೆಳಗಾಗಿ ನಿಂತ ಘಟನೆ ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಈ ಕಾರು ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪವಾಡಸದೃಶವಾಗಿ ಪಾರಾಗಿದ್ದಾರೆ. ಅಪಘಾತದಿಂದ ಎಚ್.ಟಿ. ಲೈನ್ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅಪಘಾತದಿಂದಾಗಿ ಈ ಪರಿಸರದ ಜನರಿಗೆ ಭಾನುವಾರ ಮಧ್ಯಾಹ್ನದವರೆಗೆ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು.
ಕಾರಿನಲ್ಲಿ ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆಗೆ ಸಾಗುತ್ತಿದ್ದಾಗ ಟಿಪ್ಪರ್ ಒಂದನ್ನು ಓವರ್ಟೇಕ್ ಮಾಡುವ ಸಂದರ್ಭಟಿಪ್ಪರ್ ಚಾಲಕ ಲಾರಿಯನ್ನು ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಅಪಘಾತದಿಂದ ತಪ್ಪಿಸಲು ಕಾರಿನ ಚಾಲಕ ಎಡಕ್ಕೆ ತಿರುಗಿಸಿದ್ದಾನೆ.
ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಬಡಿದು ರಸ್ತೆ ಬದಿಯಲ್ಲಿ ಹಾಕಿದ್ದ ಕಬ್ಬಿಣ ತಡೆಬೇಲಿಗೆ ಸಿಲುಕಿ ತಲೆಕೆಳಗಾಗಿ ನಿಂತಿದೆ. ಇನ್ನು ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.