ಪುತ್ತೂರು, ಮೇ.5(DaijiworldNews/AK): ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಚರಿಸುತ್ತಿದ್ದ ಶಾಂತ ಸ್ವಭಾವದ ಗೂಳಿಯೊಂದು ಏಪ್ರಿಲ್ 30ರಿಂದ ನಾಪತ್ತೆಯಾಗಿದೆ.
ದೇವಸ್ಥಾನದ ಭಕ್ತರು ಮತ್ತು ಸ್ಥಳೀಯ ಸಾರ್ವಜನಿಕರು ಗೂಳಿಯನ್ನು ಅಣ್ಣು ಎಂದು ಕರೆಯುತ್ತಿದ್ದರು. ಕರುವಾಗಿದ್ದಾಗಲೇ ಗೂಳಿಯನ್ನು ದೇವಸ್ಥಾನದ ಬಳಿ ಬಿಡಲಾಗಿತ್ತು.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕೊಡುವ ಬಾಳೆಹಣ್ಣು ಮತ್ತು ಇತರ ತಿನಿಸುಗಳನ್ನು ತಿನ್ನುತ್ತಾ ಅದು ಬೆಳೆದಿದೆ. ಗೂಳಿ ತುಂಬಾ ಶಾಂತವಾಗಿದ್ದರಿಂದ ಭಕ್ತರು ಅದನ್ನು ಪ್ರೀತಿಸುತ್ತಿದ್ದರು.ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಶೃಂಗೇರಿ ಶ್ರೀಗಳು ಕೂಡ ಈ ಮೃದು ಸ್ವಭಾವದ ಗೂಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.