ಕುಂದಾಪುರ, ಮೇ.5(DaijiworldNews/AK):ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ, ಸಿಎಎ ಜಾರಿ ಮಾಡಿದ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಋಣ ತಿರಿಸಬೇಕು. ದೇಶ, ಧರ್ಮದ ಉಳಿವಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕರೆ ನೀಡಿದರು.
ಶನಿವಾರ ಸಿದ್ದಾಪುರದಲ್ಲಿ ನಡೆದ ಬಿಜೆಪಿ ರೋಡ್ ಶೋ ನಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜಕ್ಕೆ ಇನ್ನಷ್ಟು ಶಕ್ತಿ ನೀಡಲು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ರಾಜ್ಯದಲ್ಲಿ ಮತಾಂಧರ ಪರವಾದ ಸರ್ಕಾರವಿದೆ. ಮಹಿಳೆಯ ಹತ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಗೋ ಹತ್ಯೆಯಾಗುತ್ತಿದೆ. ಹೀಗಾಗಿ ಬಿಜೆಪಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆಕೊಟ್ಟರು.
ದೇಶದ ಸುರಕ್ಷತೆ ಮೋದಿಯಿಂದ ಮಾತ್ರ:
ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್ ಮಾತನಾಡಿ, ಇದು ದೇಶ ಕಟ್ಟುವ ಚುನಾವಣೆ, ದೇಶ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿ ಬದಕಲು ಸಾಧ್ಯ. ದೇಶದ ಸುರಕ್ಷತೆ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಭಾರತದ 26,585 ವಿದ್ಯಾರ್ಥಿಗಳ ರಕ್ಷಣೆಗಾಗಿ ಉಕ್ರೇನ್- ರಷ್ಯ ಯುದ್ಧವನ್ನು 8 ಗಂಟೆ ನಿಲ್ಲಿಸಿ, ಎಲ್ಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕಾಲ್ ನಿಂದ ಇದೆಲ್ಲ ಸಾಧ್ಯವಾಗಿದೆ. ಮೋದಿಯವರ ಸಾಮರ್ಥ್ಯವನ್ನು ದಕ್ಷಿಣ ಆಫ್ರಿಕಾ, ಅರಬ್ ದೇಶ ನಾಯಕರು ಮೆಚ್ಚಿದ್ದಾರೆ. ಆದರೆ ನಮ್ಮ ದೇಶದ ಕಾಂಗ್ರೆಸ್ ನಾಯಕರಿಗೆ ಇದು ಅರ್ಥ ಆಗುತ್ತಿಲ್ಲ ಎಂದರು.
ನಮ್ಮ ಒಂದು ಮತದಿಂದ ರಾಮ ಮಂದಿರ, ಕಾಶಿ ಕಾರೀಡಾರ್, ಕಾಶ್ಮೀರ ಭಾರತದ ಭಾಗವಾಗಿ ಉಳಿದಿದೆ, ನಕ್ಸಲ್ ಚಟುವಟಿಕೆ ನಿಂತಿದೆ, ಭಯೋತ್ಪಾದಕರನ್ನು ಓಡಿಸಿದೆ. ಒಂದು ಮತದಿಂದ ಇಷ್ಟೆಲ್ಲ ಆಗಿದೆ. ಈ ಬಾರಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷ ಲೀಡ್ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸೋಣ ಎಂದರು.
ಸಿದ್ದರಾಮಯ್ಯ ಅವರು ಒಂದು ಕಾಳು ಅಕ್ಕಿಯನ್ನು ನೀಡಿಲ್ಲ:
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ ನಾರಾಯಣಗುರು ನಿಗಮ ಮಾಡಿದ್ದೇವು. ಮೀನುಗಾರರಿಗೆ, ಹಿಂದುಳಿದ ವರ್ಗಕ್ಕೆ ಸೌಲಭ್ಯ ಕಲ್ಪಿಸಿದ್ದು ಬಿಜೆಪಿ. ಆದರೆ ಅಧಿಕಾರಕ್ಕೆ ಬರುವ ಮೊದಲು ಸಿದ್ದಾಮಯ್ಯ ಅವರು ತಿಂಗಳಿಗೆ 10ಕೆ.ಜಿ. ಅಕ್ಕಿ ನೀಡುತ್ತೇನೆ ಎಂದಿದ್ದರು. ಅಧಿಕಾರಕ್ಕೆ ಬಂದ ನಂತರ ಒಂದು ಕಾಳು ಅಕ್ಕಿಯನ್ನು ನೀಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ತಿಂಗಳು ಕರ್ನಾಟಕದ ಬಡವರಿಗೆ ಹಂಚರು 25 ಲಕ್ಷ ಕ್ವಿಂಟಾಲ್ ಅಕ್ಕಿ ನೀಡುತ್ತಿದೆ ಎಂದರು.
ಕಳೆದ ಹತ್ತು ವರ್ಷದಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಹಲವಾರು ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಡಾ. ಅಂಬೇಡ್ಕರ್ ಅವರಿಗೆ ಮೋದಿ ಸರ್ಕಾರ ಸೂಕ್ತ ಗೌರವ ನೀಡಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮೋಸ ಮಾಡಿದ್ದು ಮಾತ್ರವಲ್ಲ, ಅವರನ್ನು ರಾಜಕೀಯವಾಗಿ ಸೋಲಿಸಿದೆ. ಬಿಜೆಪಿ ಎಂದೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿಲ್ಲ, ಮಾಡುವುದೂ ಇಲ್ಲ. ಸಂವಿಧಾನಕ್ಕೆ ಇನ್ನಷ್ಟು ಗೌರವ ತಂದುಕೊಟ್ಟಿರುವುದೇ ಬಿಜೆಪಿ ಎಂದು ಹೇಳಿದರು.
ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವೇ ಮೆಚ್ಚುವ ಕಾರ್ಯ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಬೂತ್ ಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ಬೂತ್ ಗೆಲ್ಲುವ ಮೂಲಕ ಕ್ಷೇತ್ರ, ದೇಶ ಗೆಲ್ಲೋಣ ಎಂದರು.
ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಮಾತನಾಡಿ, ಕ್ಷೇತ್ರದಿಂದ 1 ಲಕ್ಷ ಲೀಡ್ ನೀಡಲು ನಿಶ್ಚಯಿಸಿದ್ದೇವೆ. ಲೀಡ್ ನೀಡಲಿದ್ದೇವೆ ಮತ್ತು ನರೇಂದ್ರ ಮೋದಿಯವರನ್ನು ಕೊಲ್ಲೂರಿಗೆ ಕರೆಸಲಿದ್ದೇವೆ. ಬೈಂದೂರು ಕಾರ್ಯಕರ್ತರ ಕ್ಷೇತ್ರ. ಕಾರ್ಯಕರ್ತರು ಅದನ್ನು ಸಾಧಿಸಲಿದ್ದಾರೆ. ನವದುರ್ಗೆಯರಿಂದ ಮೊದಲು ಮತದಾನ ಸಂಕಲ್ಪಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮೂಕಾಂಬಿಕಾ ಕಾರೀಡಾರ್ ಮೂಲಕ ಬೈಂದೂರು ಇನ್ನಷ್ಟು ಸಮೃದ್ಧವಾಗಲಿದೆ ಎಂದರು.
ಕುಂದಾಪುರದ ಶಾಸಕರಾದ ಕಿರಣ್ ಕೊಡ್ಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರೋಹಿತ್ ಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಬಿಲ್ಲಾಡಿ, ಪ್ರಮುಖರಾದ ರಾಜೇಶ್ ಕಾವೇರಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.