ಉಡುಪಿ, ಮೇ.5(DaijiworldNews/AK): ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಬದಲಿ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಸಂತೆಕಟ್ಟೆಯ ಕಾಮಗಾರಿ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಮಾತನಾಡಿ, ರಾಷ್ಟೀಯ ಹೆದ್ದಾರಿ 66 ರ ಸಂತೆಕಟ್ಟೆ ಅಂಡರ್ಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಸ್ಥಳೀಯ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಹಾಗೂ ವಾಹನ ಅಪಘಾತಗಳು ಆಗುತ್ತಿರುವ ಬಗ್ಗೆ ಪ್ರಕರಣಗಳೂ ಕೇಳಿ ಬರುತ್ತಿವೆ. ಇವುಗಳ ನಿವಾರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಬದಲೀ ವ್ಯವಸ್ಥೆಗಳನ್ನು ಮಾಡುವುದರ ಮೂಲಕ ಜನಸಾಮಾನ್ಯರಿಗೆ ಉಂಟಾಗುವ ತೊಂದರೆಗಳನ್ನು ಕೂಡಲೇ ನಿವಾರಿಸಬೇಕು ಎಂದು ಅಭಿಯಂತರರುಗಳಿಗೆ ತಿಳಿಸಿದರು.
ಅಂಡರ್ಪಾಸ್ ಕಾಮಗಾರಿಯಿಂದ ದಿನನಿತ್ಯದ ವ್ಯವಹಾರಗಳಿಗೆ ಹಾಗೂ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಸಹ ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡು ಹೋಗುವ ಅನಿವಾರ್ಯತೆ ಉಂಟಾಗಿದೆ. ಪಾದಚಾರಿಗಳು ರಸ್ತೆ ದಾಟಲು ತಾತ್ಕಾಲಿಕ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸ್ಥಳಗಳಲ್ಲಿ ಕಾಮಗಾರಿ ಕೆಲಸಗಳಿಂದ ಸಂಬಂಧಪಟ್ಟ ಗುತ್ತಿಗೆದಾರರು ಅಥವಾ ಅಭಿಯಂತರ ನಿರ್ಲಕ್ಷದಿಂದ ರಸ್ತೆ ಅಪಘಾತಗಳು ಆದಲ್ಲಿ ಸಂಬಂಧಪಟ್ಟ ಅಭಿಯಂತರರುಗಳ ವಿರುದ್ಧವೂ ಸಹ ಕ್ರಿಮಿನಲ್ ಕೇಸ್ಗಳನ್ನು ಹಾಕಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಹನಗಳು ಯಾವ ಮಾರ್ಗದಲ್ಲಿ ಚಲಿಸಬೇಕು. ಅವುಗಳ ವೇಗ ಎಷ್ಟಿರಬೇಕು, ಕಾಮಗಾರಿ ನಡೆಯುತ್ತಿರುವ ಬಗ್ಗೆ ಸೇರಿದಂತೆ ಮತ್ತಿತರ ಎಚ್ಚರಿಕೆಯ ಸೂಚನಾ ಫಲಕಗಳನ್ನು ಎದ್ದು ಕಾಣುವ ರೀತಿಯಲ್ಲಿ ಅಳವಡಿಸಬೇಕು ಎಂದ ಅವರು, ಮುಂದಿನ ತಿಂಗಳಿನಿಂದ ಮುಂಗಾರು ಮಳೆ ಪ್ರಾರಂಭವಾಗುವ ಸಾಧ್ಯತೆಗಳಿದ್ದು, ಈ ಸಂದರ್ಭದಲ್ಲಿ ಕಾಮಗಾರಿಗಳ ಹಿನ್ನೆಲೆ, ಸಂಚಾರಕ್ಕೆ ವ್ಯತ್ಯಯವಾಗಲಿದೆ. ಹೀಗಾಗದಂತೆ ಶೀಘ್ರದಲ್ಲಿಯೇ ಅಗತ್ಯವಿರುವ ಕಾಮಗಾರಿಗಳನು ಕೈಗೊಳ್ಳಬೇಕು ಎಂದು ತಿಳಿಸಿದರು.
ಇಂದ್ರಾಳಿ ರೈಲ್ವೇ ಬ್ರಿಡ್ಜಿನ ಮೇಲ್ಸೇತುವೆ ಕಾಮಗಾರಿಗೆ ಬಂದಿರುವ ಕಬ್ಬಿಣದ ಗರ್ಡಲ್ಸ್ಗಳ ಜೋಡಣೆ ಕಾರ್ಯಗಳನ್ನು ಕೂಡಲೇ ಪ್ರಾರಂಭಿಸಿ, ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರಾವಳಿ ಜಂಕ್ಷನ್ನಿಂದ ಮಲ್ಪೆವರೆಗಿನ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಉಪ ವಿಭಾಗ ಅಧಿಕಾರಿಗಳು ಹಾಗೂ ಹೆದ್ದಾರಿ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.
ಪರ್ಕಳದ ಸಮೀಪ ರಾಷ್ಟೀಯ ಹೆದ್ದಾರಿ ಕಾಮಗಾರಿಯ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಪ್ರಕರಣವನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಲು ನ್ಯಾಯವಾದಿಗಳ ಜೊತೆ ಸಮನ್ವಯ ಸಾಧಿಸಿ, ಶೀಘ್ರದಲ್ಲಿಯೇ ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಮಾತನಾಡಿ, ಕಾಮಗಾರಿಗಳನ್ನು ಕೈಗೊಳ್ಳುವಾಗ ಆಗುವ ನಿರ್ಲಕ್ಷದಿಂದ ಪ್ರಾಣ ಹಾನಿಯಾಗುವ ಸಂಭವ ಇರುತ್ತದೆ. ಈ ರೀತಿ ಆಗದಂತೆ ಎಚ್ಚರವಹಿಸುವುದು ಕಾಮಗಾರಿ ಕೈಗೊಳ್ಳುವವರ ಆದ್ಯ ಕರ್ತವ್ಯ. ಒಂದೊಮ್ಮೆ ನಿರ್ಲಕ್ಷದಿಂದ ಅನಾಹುತಗಳು ಆದಲ್ಲಿ ಸಂಬಂಧಿಸಿದ ಅಭಿಯಂತರರ ಮೇಲೂ ಪ್ರಕರಣ ದಾಖಲಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಈ ರೀತಿ ಪ್ರಕರಣ ದಾಖಲಿಸಲು ಪೊಲೀಸ್ ಅಧಿಕಾರಿಗಳೂ ಸಹ ನಿರ್ಲಕ್ಷಿಸಿದರೆ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ರಶ್ಮಿ, ಉಡುಪಿ ತಹಶೀಲ್ದಾರ್ ಗುರುರಾಜ್, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್ ಅಜ್ಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.