ಬಂಟ್ವಾಳ, ಮೇ.5(DaijiworldNews/AA): ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನ ಮುಂಭಾಗದ ಗಾಜು ಏಕಾಏಕಿ ಒಡೆದ ಪರಿಣಾಮ ಚಾಲಕ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಬಂಟ್ವಾಳ ಉರಿಮಜಲು ಎಂಬಲ್ಲಿ ನಡೆದಿದೆ.
ಬಸ್ ಪುತ್ತೂರಿನಿಂದ ವಿಟ್ಲ ಮಾರ್ಗವಾಗಿ ಕಾಸರಗೋಡಿಗೆ ತೆರಳುತ್ತಿತ್ತು. ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಬಸ್ನ ಮುಂಭಾಗದ ಗಾಜು ಏಕಾಏಕಿ ಒಡೆದಿದೆ.
ಚೆರ್ಕಳ ನೆಲ್ಲಿಕಟ್ಟೆಯ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಾಲಕ ಹಾಗೂ ಇನ್ನೊಂದು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಸಿಗೆಯ ಬಿಸಿ ಹೆಚ್ಚಿರುವುದಕ್ಕೆ ಗಾಜು ಏಕಾಏಕಿ ಬಿರುಕು ಬಿಟ್ಟಿರಬೇಕು ಎಂದು ಶಂಕಿಸಲಾಗಿದೆ.