ಮಣಿಪಾಲ, ಮೇ.4(DaijiworldNews/AA): ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಹುಡೋ ಕಾಲನಿಯ ತ್ರೇಸಿಯಮ್ಮ(57) ಎಂಬವರ ಮೊಬೈಲ್ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾನೆ. ಕರೆ ಮಾಡಿದಾತ ತಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ತ್ರೇಸಿಯಮ್ಮ ಅವರ ಬಳಿ ಖಾತೆ ನಂಬರ್, ಕಸ್ಟಮರ್ ಐಡಿ, ಆಧಾರ್ ನಂಬರ್, ಡೇಟ್ ಆಫ್ ಬರ್ತ್ ಇತ್ಯಾದಿ ವಿವರಗಳನ್ನು ಕೇಳಿದ್ದಾನೆ.
ಆ ವ್ಯಕ್ತಿಯ ಮಾತನ್ನು ನಂಬಿದ ಅವರು ಆತ ಕೇಳಿದ ಎಲ್ಲಾ ವಿವರಗಳನ್ನು ನೀಡಿದ್ದಾರೆ. ನಂತರ ಮೊಬೈಲ್ಗೆ ಬಂದ ಓಟಿಪಿ ನಂಬರ್ ಮತ್ತು ನಾಮಿನಿ ವಿವರವನ್ನು ಕೂಡ ಅವರು ನೀಡಿದ್ದರು. ಬಳಿಕ ಆ ವ್ಯಕ್ತಿ ತ್ರೇಸಿಯಮ್ಮ ಹಾಗೂ ಅವರ ಗಂಡನ ಖಾತೆಯಿಂದ ಒಟ್ಟು 3,91,563ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿರುವುದಾಗಿ ದೂರು ದಾಖಲಾಗಿದೆ.