ಬಂಟ್ವಾಳ, ಮೇ.4(DaijiworldNews/AA): ಆಮೆಗತಿಯಲ್ಲಿ ಸಾಗುತ್ತಿರುವ ಬಿಸಿರೋಡು - ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಕೆ.ಎನ್.ಆರ್.ಸಿ.ಕಂಪೆನಿಯ ಬೇಜಾವಬ್ದಾರಿತನಕ್ಕೆ ತಾಲೂಕಿನ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕಿದೆ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಮಾಯಕ ವೃದ್ಧರೊಬ್ಬರು ಪಾಣೆಮಂಗಳೂರು ಸೇತುವೆಗೆ ಸಂಪರ್ಕಿಸುವ ಜಾಗದಲ್ಲಿ ಪ್ರಾಣಕಳೆದುಕೊಂಡಿದ್ದರು. ಹೀಗೆ ಕಾಮಗಾರಿ ಆರಂಭವಾದಾಗಿನಿಂದ ಈವರೆಗೆ ಇವರ ಅವೈಜ್ಞಾನಿಕ ರೀತಿಯಲ್ಲಿ ನಡೆಸುವ ಕಾಮಗಾರಿಗೆ ಅನೇಕರು ಬಲಿಯಾದರೆ, ಇನ್ನು ಕೆಲವರು ಜೀವನ ಕಳೆದುಕೊಂಡಿದ್ದಾರೆ ಎಂದು ಜನರು ಆರೋಪ ಮಾಡುತ್ತಿದ್ದಾರೆ.
ನೇತ್ರಾವತಿ ಸೇತುವೆಯ ಒಂದು ಭಾಗದಲ್ಲಿ ಅಂದರೆ ಬಿಸಿರೋಡಿನಿಂದ ಪಾಣೆಮಂಗಳೂರು ಸೇತುವೆ ಸಂಪರ್ಕ ಮಾಡುವ ಜಾಗದಲ್ಲಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಹೊಂಡಗುಂಡಿಗಳಿಂದ ಕೂಡಿದೆ. ವಾಹನ ಸವಾರರು ಕೊಂಚ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ಜಾಗದಲ್ಲಿ ನರಿಕೊಂಬು ಗ್ರಾಮದ ಹಿರಿಯರೊಬ್ಬರು ಬಲಿಯಾಗಿದ್ದರು.
ಇದೇ ರೀತಿ ಬಿಸಿರೋಡಿನಿಂದ ಮಾಣಿವರೆಗೂ ಅಲ್ಲಲ್ಲಿ ಸಂಪರ್ಕ ಮತ್ತು ಡೈವರ್ಷನ್ ಕೊಟ್ಟ ಜಾಗದಲ್ಲಿ ಅಪಘಾತಗಳು ಪಕ್ಕಾ ಎಂಬಂತಿದೆ. ಇನ್ನು ಕೆಲವು ಕಡೆ ರಸ್ತೆಯಲ್ಲಿ ಮಣ್ಣು ಮತ್ತು ಮರಳುಗಳು ತುಂಬಿದ್ದು, ದ್ವಿ ಚಕ್ರವಾಹನ ಸವಾರರಿಗಂತೂ ಅಪಾಯವಾಗುವ ಸಾಧ್ಯತೆ ಹೆಚ್ಚು. ಕಂಪೆನಿಗೆ ಸೇರಿದ ಘನಗಾತ್ರದ ಲಾರಿಗಳು ಚಲಿಸುವ ರೀತಿ ಇತರ ವಾಹನ ಸವಾರರಿಗೆ ಅಪಾಯವೇ ಸರಿ. ಎ.ಸಿ.ಲಾರಿಯಲ್ಲಿ ಮೊಬೈಲ್ ನಲ್ಲಿ ಹಾಡು ಕೇಳುತ್ತಾ ಕಿವಿಗೆ ಇಯರ್ ಪೋನ್ ಸಿಕ್ಕಿಸಿಕೊಂಡು ಇತರರ ಗಮನವೇ ಇಲ್ಲದಂತೆ ರಸ್ತೆಯಲ್ಲಿ ನಿಯಮ ಮೀರಿ ಚಲಿಸುವ ಚಾಲಕರಿಗೆ ಬ್ರೇಕ್ ಹಾಕುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ವಿಷನ್ ಇಲ್ಲದೆ ನಡೆಸುವ ಕಾಮಗಾರಿಯಿಂದ ಕಲ್ಲಡ್ಕದಲ್ಲಿ ನಿತ್ಯವೂ ಬ್ಲಾಕ್ ಆದರೆ ಇದೀಗ ಬಿಸಿರೋಡಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಗುತ್ತಿಗೆ ವಹಿಸಿಕೊಳ್ಳುವಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬದಲಿ ರಸ್ತೆ ನಿರ್ಮಾಣ ಮಾಡಿ ಬಳಿಕ ಕಾಮಗಾರಿ ಆರಂಭಿಸಲು ಸರಕಾರ ಸೂಚಿಸಿರುತ್ತದೆ. ಆದರೆ ಕಂಪೆನಿ ಮಾತ್ರ ಸರ್ಕಾರದ ಕೆಲವು ನಿಯಮಗಳನ್ನು ಪಾಲಿಸದೆ ತಮಗೆ ಇಷ್ಟಬಂದಂತೆ ವರ್ತಿಸಿ ಕಾಮಗಾರಿ ನಡೆಸುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ಎಂಬುದು ಅಧಿಕಾರಿಗಳು ಮತ್ತು ಕಂಪೆನಿ ವಾದವಾದಗಿದೆ. ಆದರೆ ಸಂಚಾರಕ್ಕೆ ಅನುಕೂಲವಾಗುವಂತೆ ಬದಲಿ ರಸ್ತೆಯನ್ನು ನಿರ್ಮಾಣ ಮಾಡುವಲ್ಲಿ ಕಂಪೆನಿಗೆ ಅಧಿಕಾರಿಗಳು ಯಾಕೆ ಒತ್ತಡ ಹಾಕುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಕಾಮಗಾರಿ ಆರಂಭವಾದ ಬಳಿಕ ರಸ್ತೆ ಬದಿ ಮನೆ ಇದ್ದವರು, ಅಂಗಡಿ ಮತ್ತು ನಿತ್ಯ ಸಂಚಾರ ಮಾಡುವ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಎ.ಸಿ.ರೂಂನಲ್ಲಿ ಕುಳಿತು ಹೇಳಿಕೆ ನೀಡುವ ಅಧಿಕಾರಿಗಳು ವಿಮಾನದ ಮೂಲಕ ಹಾರಾಟ ಮಾಡುತ್ತಾರೆ, ಅವೆರಿಗೆಲ್ಲಿ ಅರ್ಥ ವಾಗಬೇಕು ಜನಸಾಮಾನ್ಯರ ಬದುಕಿನ ಕಷ್ಟ ಎಂದು ಹಿರಿಯರು ಒಬ್ಬರು ಆರೋಪ ಮಾಡಿದ್ದಾರೆ.
ಪಾಣೆಮಂಗಳೂರು ಅಪಘಾತಕ್ಕೆ ಕೆ.ಎನ್.ಆರ್.ಸಿ.ಕಂಪನಿಯೇ ಕಾರಣ ಎಂದು ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ಆರೋಪಿಸಿದ್ದಾರೆ. ಕಂಪನಿಯ ಅವ್ಯವಸ್ಥೆ ಮತ್ತು ಬೇಜಾವಬ್ದರಿತನದ ಕಾಮಗಾರಿಯಿಂದ ಪಾಣೆಮಂಗಳೂರಿನಲ್ಲಿ ಲಾರಿ ಮತ್ತು ದ್ವಿಚಕ್ರವಾಹನ ಅಪಘಾತದಲ್ಲಿ ಹಿರಿಯರೊಬ್ಬರು ಜೀವಕಳೆದುಕೊಂಡಿದ್ದಾರೆ. ಕಾಮಗಾರಿ ಆರಂಭವಾಗಿ ವರ್ಷಗಳು ಉರುಳುತ್ತಲೇ ಇದೆ,ಆದರೆ ಒಂದು ಭಾಗದಲ್ಲಿ ಆದರೂ ರಸ್ತೆಯ ಅಂತಿಮ ಸ್ಪರ್ಶ ಕಂಡಿಲ್ಲ. ಅಲ್ಲಲ್ಲಿ ಅಗೆದುಹಾಕಿ ಸಂಚಾರ ಮಾಡದಂತೆ ಮಾಡಿರುವ ಕಂಪೆನಿಯ ಬೇಜಾವಬ್ದಾರಿತನಕ್ಕೆ ಅನೇಕರು ಬಲಿಯಾಗಿದ್ದಾರೆ. ರಸ್ತೆ ಕಾಮಗಾರಿ ವೇಳೆ ಸಂಚಾರಕ್ಕೆ ಬದಲಿ ಯೋಗ್ಯ ರಸ್ತೆಯನ್ನು ನಿರ್ಮಿಸಿಕೊಂಡು ಕಾಮಗಾರಿ ನಡೆಸಬೇಕು.
ಕಂಪೆನಿಯ ನಿಧಾನಗತಿಯ ಕೆಲಸ ನೋಡಿದರೆ ಇನ್ನೂ ಅನೇಕ ವರ್ಷಗಳ ಕಾಲ ಕಾಮಗಾರಿ ಮುಗಿಸುವುವಂತೆ ಕಾಣುತ್ತಿಲ್ಲ. ಹಾಗಾಗಿ ಮಳೆಗಾಲ ಆರಂಭವಾಗುವ ಮುನ್ನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆಯನ್ನು ನಿರ್ಮಿಸಿಕೊಡಿ. ಆ ಬಳಿಕ ಕಾಮಗಾರಿ ನಡೆಸಿ, ಇಲ್ಲದೆ ಹೋದರೆ ಕಂಪೆನಿ ವಿರುದ್ದ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸುರೇಶ್ ಕೋಟ್ಯಾನ್ ನೀಡಿದ್ದಾರೆ.
ಪಾಣೆಮಂಗಳೂರು ಹಳೆಯ ಸೇತುವೆಯನ್ನು ಕಸದ ಬುಟ್ಟಿಯಂತೆ ಬಳಸುತ್ತಿದ್ದು, ಅದರಲ್ಲಿ ಇವರ ಕಾಮಗಾರಿಗೆ ಉಪಯೋಗಿಸುವ ಜಲ್ಲಿ, ಮರಳು ಇತರ ಕಬ್ಬಿಣದ ವಸ್ತುಗಳನ್ನು ರಾಶಿ ಹಾಕುವುದು ಸರಿಯಲ್ಲ, ಆ ಸೇತುವೆಗೂ ಮೌಲ್ಯವಿದೆ. ಇದರೊಂದಿಗೆ ಇವರು ರಾಶಿ ಹಾಕಿರುವ ವಸ್ತುಗಳಿಂದ ಮತ್ತು ಅನಾವಶ್ಯಕವಾಗಿ ನಿಲ್ಲಿಸುವ ಕಂಪನಿಯ ವಾಹನಗಳಿಂದ ಅಪಘಾತ ಸಂಭವಿಸಿ ಸಾವು ನೋವು ಉಂಟಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಕಂಪೆನಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.