ಕಾಸರಗೋಡು,ಮೇ 06 (Daijiworld News/MSP): ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆಯ ಬಳಿಕ ತಣ್ಣಗಾಗಿದ್ದ ಪೆರಿಯ ಕಲ್ಯೊಟ್ ಪರಿಸರದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಮರುಕಳಿಸಿದೆ. ಭಾನುವಾರ ರಾತ್ರಿ ಯುವ ಕಾಂಗ್ರೆಸ್ ಕಾರ್ಯಕರ್ತನೋರ್ವನ, ಮನೆಗೆ ಕಚ್ಚಾ ಬಾಂಬೆಸೆದ ಘಟನೆ ನಡೆದಿದ್ದು , ಇದಲ್ಲದೆ ಕಲ್ಲೆಸೆತದಿಂದ ಮೂರು ಸಿಪಿಎಂ ಕಾರ್ಯಕರ್ತರ ಮನೆಗೂ ಹಾನಿಗೊಳಿಸಲಾಗಿದೆ. ಆರಕ್ಕೂ ಅಧಿಕ ವಾಹನಗಳನ್ನು ಹಾನಿಗೊಳಿಸಲಾಗಿದೆ .
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಕಲ್ಲೆಸೆಯಲಾಗಿದ್ದು , ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಕೊಲೆಗೀಡಾದ ಕೃಪೇಶ್ ಮತ್ತು ಶರತ್ ಲಾಲ್ ರ ಸ್ನೇಹಿತ ಯುವ ಕಾಂಗ್ರೆಸ್ ಕಾರ್ಯಕರ್ತ ದೀಪು ಕೃಷ್ಣನ್ ಅವರ ಮನೆ ಮೇಲೆ ಭಾನುವಾರ ತಡರಾತ್ರಿ ಕಚ್ಚಾ ಬಾಂಬ್ ಎಸೆದ ಪರಿಣಾಮ. ಮನೆಯ ಗೋಡೆ ಹಾಗೂ ಕಿಟಿಕಿ ಗಾಜುಗಳು ಬಿರುಕು ಬಿಟ್ಟಿವೆ.
ದೀಪು ಮತ್ತು ಮನೆಯವರು ಮನೆಯೊಳಗೆ ಮಲಗಿದ್ದರೂ ಅಪಾಯವಿಲ್ಲದೆ ಪಾರಾಗಿದ್ದಾರೆ . ಶಬ್ದ ಕೇಳಿ ಹೊರಗಡೆ ಗಮನಿಸಿದಾಗ ಯುವಕರಿಬ್ಬರು ಪರಾರಿಯಾಗುತ್ತಿರುವುದು ಕಂಡು ಬಂದಿದೆ. ಈ ನಡುವೆ ಗುಂಪೊಂದು ಸಿಪಿಎಂ ಕಾರ್ಯಕರ್ತರಾದ ವತ್ಸನ್, ಬಾಲಕೃಷ್ಣನ್, ಬಾಬು ಎಂಬವರ ಮನೆಗಳಿಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ಈ ಘಟನೆ ಬಳಿಕ ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಿಸರದಲ್ಲಿ ಘರ್ಷಣೆ ನಡೆದಿದೆ.ಘರ್ಷಣೆ ನಿಯಂತ್ರಿಸಲು ಸ್ಥಳಕ್ಕೆ ತಲಪಿದ ಪೋಲೀಸರ ಮೇಲೆ ಕಲ್ಲೆಸೆಯಲಾಗಿದ್ದು , ಇಬ್ಬರು ಗಾಯಗೊಂಡಿದ್ದಾರೆ .
ಗಾಯಗೊಂಡಿರುವ ಪೊಲೀಸ್ ಸಿಬಂದಿಗಳಾದ ಸುರೇಶ್ ಮತ್ತು ಪ್ರದೀಪ್ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಕಾರು , ಜೀಪು , ಟೆಂಪೋ , ಬೈಕ್ ಸಹಿತ ಆರಕ್ಕೂ ಅಧಿಕ ವಾಹನಗಳನ್ನು ಹಾನಿಗೊಳಿಸಲಾಗಿದೆ ಸ್ಥಳದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು , ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಫೆಬ್ರವರಿ ೧೭ ರಂದು ಯುವ ಕಾಂಗ್ರೆಸ್ ಕಾರ್ಯಕರ್ತ ರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈಯ್ಯಲಾಗಿತ್ತು .
ಬಳಿಕ ಪರಿಸರದಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಬಂದೋ ಬಸ್ತ್ ಏರ್ಪಡಿಸಿದ್ದರು . ಈ ನಡುವೆ ಪರಿಸ್ಥಿತಿ ಶಾಂತವಾದ ಹಿನ್ನಲೆಯಲ್ಲಿ ಪೊಲೀಸ್ ಬಂದೋ ಬಸ್ತ್ ನ್ನು ಹಿಂತೆಗೆದುಕೊಳ್ಳಲಾಗಿತ್ತು . ಇದರ ಬೆನ್ನಿಗೆ ಇದೀಗ ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ , ಹಿಂಸಾಚಾರ ಮರುಕಳಿಸಿದೆ.