ಉಡುಪಿ, ಮೇ.3(DaijiworldNews/AK):ಬೇಸಗೆ ಹಿನ್ನೆಲೆ, ಸೂರ್ಯನ ಶಾಖದಿಂದ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಹೀಟ್ ವೇವ್ ಸ್ಟೋಕ್ (ಶಾಖದ ಹೊಡೆತ) ದಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಮುಂಜಾಗ್ರತಾ ಕ್ರಮವಾಗಿ ಕೆಲವು ಸಲಹೆ ನೀಡಿದೆ.
ಹೊರಗಡೆ ಕೆಲಸ ನಿರ್ವಹಿಸುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ, ಬೀದಿ ಬದಿ ವ್ಯಾಪಾರಸ್ಥರ ಸಹಿತ ಇತರ ಎಲ್ಲ ಕೆಲಸಗಾರರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉದ್ದಿಮೆಗಳ ಮಾಲಕರು ಗಮನ ಹರಿಸುವಂತೆ ತಿಳಿಸಲಾಗಿದೆ.ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ತಂಪಾದ ಕುಡಿಯುವ ನೀರು, ಎಲೆಕ್ಟೋಲೈಟ್ ಪೂರಕಗಳ ವ್ಯವಸ್ಥೆಯನ್ನು ಮಾಲಕರು ಮಾಡಬೇಕು.
ಡಿ-ಹೈಡೇಟೆಡ್ ಆಗದಂತೆ ಕಾರ್ಮಿಕರು ಮತ್ತು ಎಲ್ಲರೂ ಪ್ರತೀ 20 ನಿಮಿಷಗಳಿಗೊಮ್ಮೆ ಅಥವಾ ಹೆಚ್ಚು ಬಾರಿ ನೀರು ಕುಡಿಯಬೇಕು, ಕೆಲಸದ ಮಧ್ಯದಲ್ಲಿ ವಿಶ್ರಾಂತಿ ಪಡೆದು ಕೆಲಸ ಮಾಡಲು ಗಮನ ವಹಿಸಬೇಕು. ಶ್ರಮದಾಯಕ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಬೆಳಗ್ಗೆ ಅಥವಾ ಸಂಜೆ ನಿರ್ವಹಿಸಬೇಕು ಎಂದರು.
ಕಾರ್ಮಿಕರು ಅದಷ್ಟು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ನೇರ ಸೂರ್ಯನ ಬಿಸಿಲಿನಲ್ಲಿ ಕೆಲಸ ನಿರ್ವಹಿಸದಂತೆ ಮಾಲಕರು ಎಚ್ಚರ ವಹಿಸಬೇಕು. ಸಾಧ್ಯವಾದಲ್ಲಿ ಬೃಹತ್ ಕಟ್ಟಡ ಮತ್ತು ಇತರ ನಿರ್ಮಾಣದಾರರು ಕೆಲಸದ ಪಾಳಿಯನ್ನು ರಾತ್ರಿ ವೇಳೆ ಮಾಡಬಹುದು. ಹೆಚ್ಚು ಬಿಸಿಲಿನ ತಾಪಮಾನವಿರುವ ಸಮಯದಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ನೆರಳಿರುವ ಪ್ರದೇಶವನ್ನು ಮಾಲಕರು ಒದಗಿಸಬೇಕು ಅಥವಾ ನೌಕರರು, ಕಾರ್ಮಿಕರಿಗೆ ಕೆಲಸದ ಸಮಯವನ್ನು ಕಾರ್ಮಿಕರೊಂದಿಗೆ ಸಮಾಲೋಚಿಸಿ ಮರು ನಿಗದಿಪಡಿಸಿಕೊಳ್ಳಬೇಕು.
ಕೆಲಸದ ಸಮಯದಲ್ಲಿ ಕಾರ್ಮಿಕರು ಆದಷ್ಟು ಹತ್ತಿ, ಬಿಳಿ ಬಣ್ಣದ ತುಂಬು ತೋಳಿನ ಅಂಗಿ/ಬಟ್ಟೆ ಟೋಪಿ, ಕೂಲಿಂಗ್ ಗ್ಲಾಸ್ ಧರಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಅಧ್ಯಕ್ಷ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.