ಬೈಂದೂರು, ಮೇ.1(DaijiworldNews/AK): ನಮ್ಮ ರಾಷ್ಟ್ರ ಭಕ್ತ ಬಳಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ 2238 ಬೂತ್ಗಳಲ್ಲಿ ಬೂತ್ ಸಮಿತಿ ರಚನೆ ಮಾಡಿರುವ ಏಕೈಕ ಸಂಘಟನೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಅವರು ಬೈಂದೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, . ಕೆಲವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈಶ್ವರಪ್ಪ ಕೇವಲ 25000 ಒಳಗಡೆ ಮತ ಪಡೆಯುತ್ತಾರೆ ಎನ್ನುವ ಮಾಹಿತಿಗಳನ್ನು ಹರಿಬಿಡುತ್ತಿದ್ದಾರೆ. ಆದರೆ ಈ ಬಾರಿ ಪಕ್ಷಾತೀತವಾಗಿ ಮತದಾರರು ಕೆಎಸ್ ಈಶ್ವರಪ್ಪನವರನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.
ನಮ್ಮ ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗೂ ಭೇಟಿ ನೀಡಿ ನಮ್ಮ ಕಬ್ಬು ಹಿಡಿದಿರುವ ರೈತನ ಚಿಹ್ನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ರಮ ಸಂಖ್ಯೆ ಎಂಟು ಎನ್ನುವುದನ್ನು ತಿಳಿಸಿ ಹೇಳಿದ್ದಾರೆ. ಹಾಗಾಗಿ ಈ ಬಾರಿ ಈಶ್ವರಪ್ಪ ಗೆಲ್ಲುತ್ತಾರೆ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಗೀತಾ ಶಿವರಾಜಕುಮಾರ್ ಅವರನ್ನು ಕಣಕ್ಕಿಳಿಸಿರುವುದು ಕಾಂಗ್ರೆಸ್ ಮತದಾರರಿಗೆ ಅಸಮಾಧಾನ ತಂದಿದೆ. ಅದೇ ರೀತಿ ರಾಘವೇಂದ್ರ ಅವರಿಗೆ ಮತ ನೀಡಲು ಮನಸ್ಸಿಲ್ಲದ ಮತದಾರರು ಕೂಡ ಬಹುಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲರೂ ಹಿಂದುತ್ವವಾದಿ ರಾಷ್ಟ್ರ ರಕ್ಷಣೆಗಾಗಿ ನನ್ನನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ. ಜೆಡಿಎಸ್ ನವರು ಅನೇಕ ಕಡೆಗಳಲ್ಲಿ ಈಗಾಗಲೇ ನನ್ನ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಆರಂಭದಲ್ಲಿ ಈಶ್ವರಪ್ಪ ಜೊತೆಗಿದ್ದ ಶ್ರೀಧರ್ ಬಿಜೂರು ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಸಿದ ಈಶ್ವರಪ್ಪ, ಒಂದು ಅರ್ಥದಲ್ಲಿ ಬೈಂದೂರಿನಲ್ಲಿ ರಾಷ್ಟ್ರ ಭಕ್ತ ಬಳಗವನ್ನ ಸಂಘಟಿಸಿದವರು ಶ್ರೀಧರ್ ಬಿಜೂರು ಆ ಬಗ್ಗೆ ನನಗೆ ಅವರಲ್ಲಿ ಗೌರವವಿದೆ ಆದರೆ ಅವರು ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಬಗ್ಗೆ ಕೊಡುವ ಕಾರಣ ಒಪ್ಪಿಕೊಳ್ಳುವಂಥದ್ದಲ್ಲ. ಅವರಿಗೆ ನನ್ನ ಮೇಲೆ ಇನ್ನೂ ಗೌರವ ಇದೆ ಎನ್ನುವುದನ್ನು ನಾನು ಬಲ್ಲೆ, ಅವರು ಯಾವ ಕಾರಣಕ್ಕೆ ಹೋಗಿದ್ದರು ಗೊತ್ತಿಲ್ಲ ಆದರೆ ಪಕ್ಷೇತರನಾಗಿ ಸ್ಪರ್ಧಿಸುತ್ತಿರುವ ನನ್ನನ್ನು ಅವರು ಆರಂಭದಲ್ಲಿ ಜೊತೆಗೆ ಇರುವ ಮೂಲಕ ನನಗೆ ಬೆಂಬಲ ನೀಡಿರುವುದು ನಾನು ಮರೆಯುವುದಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಪ್ರತಿಕ್ರಿಸಿದ ಈಶ್ವರಪ್ಪ, ಅದೊಂದು ದರಿದ್ರ ಸಬ್ಜೆಕ್ಟ್. ಅದರ ಬಗ್ಗೆ ಮಾತನಾಡಿದರೆ ನಮ್ಮ ಬಾಯಲ್ಲಿ ಹುಳ ಬೀಳುತ್ತೆ. ಮಾತೆಯರ ಮರ್ಯಾದೆ ಹರಾಜಾಗಲಿಲ್ಲ. ಮಹಾಭಾರತದಲ್ಲಿ ದುಶ್ಯಾಸನ ಮಾತೆಯ ವಸ್ತ್ರಾಪಹರಣ ಮಾಡುವ ಮೂಲಕ ಮರ್ಯಾದೆ ಕಳೆಯುವ ಪ್ರಯತ್ನ ಮಾಡಿದರೂ ಇಂದಿಗೂ ನಾವು ಮಾತೆಯನ್ನು ಪೂಜಿಸುತ್ತೇವೆ. ಆದರೆ ದುಶ್ಯಾಸನ ಅದರ ಪಾಪವನ್ನು ಅನುಭವಿಸಿದ್ದಾನೆ. ಅದೇ ರೀತಿ ಈ ಪ್ರಕರಣವು ಕೂಡ ಎಂದರು.
ಕಾಂತೇಶ್ ಸ್ಟೇ ತಂದಿರುವ ವಿಚಾರದ ಕುರಿತು ಪ್ರಶ್ನಿಸಿದಾಗ, ಇದು ಚುನಾವಣಾ ಸಮಯ. ಈ ಸಂದರ್ಭದಲ್ಲಿ ಬಿಜೆಪಿಯಿಂದ ಹೊರಬಂದು ರಾಷ್ಟ್ರ ಬಳಗದ ಮೂಲಕ ಸ್ಪರ್ಧೆ ಮಾಡುತ್ತಿರುವ ನನ್ನ ಮತ್ತು ನನ್ನ ಕುಟುಂಬವನ್ನು ಹಣೆಯುವ ಕುತಂತ್ರಗಳಿಗೆ ಜಾಗೃತನಾಗಿ ಕಾಂತೇಶ್ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಕುತಂತ್ರಗಳು ನಡೆಯುತ್ತಿರುತ್ತವೆ ಎಂದರು.
ನಾನು ಎಂಪಿ ಆದ ತಕ್ಷಣ ಸಂಬಂಧಪಟ್ಟ ಮಂತ್ರಿಗಳನ್ನ ಕೇಂದ್ರದಿಂದ ಬೈಂದೂರಿಗೆ ಕರೆಸಿಕೊಂಡು ಇಲ್ಲಿನ ಪ್ರವಾಸೋದ್ಯಮ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಅಷ್ಟು ಅಭಿವೃದ್ಧಿಗಳನ್ನ ಸ್ವತಹ ನಾನೇ ಖುದ್ದು ಕಾರ್ಯಗತಗೊಳಿಸುತ್ತೇನೆ ಎಂದರು.
ಕರಾವಳಿಯ ಮೀನುಗಾರರ ಸಮಸ್ಯೆಗಳಿಗೆ ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿದ್ದವರು ಯಾಕೆ ಸ್ಪಂದಿಸಿಲ್ಲ ಎಂದು ಪ್ರಶ್ನಿಸಿದ ಈಶ್ವರಪ್ಪ, ಅದೇ ಕಾರಣಕ್ಕೆ ಈ ಬಾರಿ ಮೀನುಗಾರರು ರಾಘವೇಂದ್ರ ಅವರನ್ನು ಕೈ ಬಿಡಲಿದ್ದಾರೆ ಮತ್ತು ನನ್ನನ್ನು ಅತಿ ಹೆಚ್ಚು ಮತಗಳಿಂದ ಸಂಸದನಾಗಿ ಆಯ್ಕೆ ಮಾಡಲಿದ್ದಾರೆ. ಖಂಡಿತವಾಗಿಯೂ ನಾನು ಮೀನುಗಾರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಅವರ ಸಮಸ್ಯೆಗಳ ಶಾಶ್ವತ ಪರಿಹಾರ ಮಾಡಿಯೇ ಸಿದ್ಧ ಎಂದರು. ಈ ಸಂದರ್ಭ ರಾಷ್ಟ್ರಭಕ್ತ ಬಳಗದ ಪ್ರಮುಖರು ಈಶ್ವರಪ್ಪ ಜೊತೆಗಿದ್ದರು.