ಮಂಗಳೂರು, ಏ.30(DaijiworldNews/AA): ಕೃಷಿ ರಕ್ಷಣೆಗಾಗಿ ಆಯುಧ ಪರವಾನಗಿ ಹೊಂದಿರುವ (ಪೊಲೀಸ್ ಆಯುಕ್ತರ ಕಾರ್ಯವ್ಯಾಪ್ತಿಯನ್ನು ಹೊರತುಪಡಿಸಿ) ಎಲ್ಲಾ ಆಯುಧ ಪರವಾನಗಿದಾರರು ತಮ್ಮ ಆಯುಧಗಳನ್ನು ಈಗಾಗಲೇ ಠೇವಣಿ ಇರಿಸಿರುವ ಪೊಲೀಸ್ ಠಾಣೆ/ಅಧಿಕೃತ ಕೋವಿ ಹಾಗೂ ಮದ್ದುಗುಂಡು ವ್ಯಾಪಾರಸ್ಥರಿಂದ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭ ಶಸ್ತ್ರಾಸ್ತ್ರಗಳ ಬಳಕೆಯ ನಿರ್ಬಂಧ ಹೇರುವುದನ್ನು ಹಿಂಪಡೆಯುವ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳಾದ ರಿಷ್ಯಂತ್ ಸಿ.ಬಿ. ಅವರ ನೇತೃತ್ವದಲ್ಲಿ ನಡೆದ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಆಯುಧಗಳನ್ನು ಹಿಂಪಡೆಯುವವರಿಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಅದರಂತೆ ಯಾವುದೇ ಮೆರವಣಿಗೆ, ಜಾತ್ರೆ ಇತ್ಯಾದಿ ಸಂದರ್ಭ ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗುವಂತಿಲ್ಲ. ಕೇವಲ ಬೆಳೆಗಳ ರಕ್ಷಣೆಗಾಗಿ ಮಾತ್ರ ಈ ಶಸ್ತ್ರಾಸ್ತ್ರ ಬಳಸಬೇಕು. ಜೊತೆಗೆ ಎಲ್ಲೂ ಈ ಆಯುಧಗಳನ್ನು ಪ್ರದರ್ಶಿಸುವಂತಿಲ್ಲ. ಪೊಲೀಸ್ ಅಧಿಕಾರಿಗಳು/ ಸರಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ಹಾಜರುಪಡಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಳಸಿದರೆ ಯಾವುದೇ ಮುನ್ಸೂಚನೆ ನೀಡದೆ ವಶಕ್ಕೆ ಪಡೆಯಲಾಗುತ್ತದೆ ಎಂದು ಆದೇಶಿಸಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಶಸ್ತ್ರಾಸ್ತ್ರ ಹಿಂಪಡೆಯುವವರು ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿದಲ್ಲಿ ಐಪಿಸಿ ಸೆಕ್ಷನ್ 188ರಂತೆ ಪ್ರಕರಣ ದಾಖಲಿಸಲು ಹಾಗೂ ಪರವಾನಗಿ ರದ್ದುಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.