ಉಪ್ಪಿನಂಗಡಿ, ಏ.28(DaijiworldNews/AA): 'ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧೂವರರಿಗೆ ನೀಡುವ ಉಡುಗೊರೆ' ಎಂದು ಮದುವೆಯ ಆಮಂತ್ರಣ ಪತ್ರಿಕೆ ಮೇಲೆ ಮುದ್ರಿಸಿರುವುದಕ್ಕೆ ವರನ ವಿರುದ್ಧ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ಆಲಂತಾಯ ಗ್ರಾಮದ ಶಿವಪ್ರಸಾದ್ ಯಾನೆ ರವಿ ಅವರ ಮದುವೆಯು ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಪ್ರಮೀಳಾ ಕೆ ಅವರೊಂದಿಗೆ ಏ. 18ರಂದು ಗೋಳಿತೊಟ್ಟು ಸಿದ್ದಿವಿನಾಯಕ ಕಲಾ ಮಂದಿರದಲ್ಲಿ ನಡೆದಿತ್ತು. ಇವರ ಆಮಂತ್ರಣ ಪತ್ರವನ್ನು ಮಾರ್ಚ್ 1ರಂದು ಮುದ್ರಿಸಲಾಗಿದ್ದು, ಇದರಲ್ಲಿ 'ಈ ಬಾರಿಯೂ ಮೋದಿಯನ್ನು ಪ್ರಧಾನಿ ಮಾಡುವುದೇ ವಧೂವರರಿಗೆ ನೀಡುವ ಉಡುಗೊರೆ. ಯಾಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು' ಎಂದು ಮುದ್ರಿಸಲಾಗಿದೆ.
ಚುನಾವಣ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ವಧು-ವರರ ಮದುವೆ ಹಾಗೂ ಏ.26ರ ಚುನಾವಣೆ ಮುಗಿದ ಬಳಿಕ ಅಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು. ಅದರಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.