ಬಂಟ್ವಾಳ, ಮೇ 06 (Daijiworld News/MSP): ಯಾವಾಗಲೂ ಸಮವಸ್ತ್ರ ತೊಟ್ಟು ಕೈಯಲ್ಲಿ ಬೆತ್ತ ಹಿಡಿದು, ಸೀಟಿ ಊದಿ ಟ್ರಾಫಿಕ್ ಕಿರಿಕಿರಿಯನ್ನು ಸರಿ ಮಾಡುತ್ತಿದ್ದ ಸಂಚಾರಿ ಪೋಲೀಸರು ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದರು. ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಖಾಕಿ ಪ್ಯಾಂಟ್ ಧರಿಸಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮೆಲ್ಕಾರ್ ಟ್ರಾಫಿಕ್ ಠಾಣೆಯಿಂದ ಎಲ್ಲಾ ಸಿಬ್ಬಂದಿ ಗಳು ಸಾಲಾಗಿ ರಸ್ತೆಯಲ್ಲಿ ಶಿಸ್ತು ಬದ್ದವಾಗಿ ನಡೆದುಕೊಂಡು ಹೋಗುವಾಗ ಸಾರ್ವಜನಿಕರ ಚಿತ್ತ ಪೊಲೀಸರ ಮೇಲೆಯೇ ಇತ್ತು. ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಿಂದ ನೇರವಾಗಿ ವಾಕಿಂಗ್ ಮೂಲಕ ತೆರಳಿದ್ದು ನರಹರಿ ಸದಾಶಿವ ಪರ್ವತಕ್ಕೆ.
ದಿನದ 24 ಗಂಟೆಯೂ ಕೆಲಸದ ಒತ್ತಡದ ಮಧ್ಯೆ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ವಾರಕ್ಕೊಮ್ಮೆಯಾದರೂ ಟ್ರಕ್ಕಿಂಗ್ , ವಾಕಿಂಗ್ , ಯೋಗ , ಹೀಗೆ ಬೇರೆ ಬೇರೆ ರೀತಿಯಲ್ಲಿ ಪೊಲೀಸರನ್ನು ತೊಡಗಿಸಿಕೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಸೂಚಿಸಿದ್ದಾರಂತೆ ಹಾಗಾಗಿ ಭಾನುವಾರ ಈ ವಿನೂತನ ರೀತಿಯ ಯೋಜನೆಗೆ ಚಾಲನೆ ನೀಡಿದ್ದಾರೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರ ಅದೇಶದಂತೆ ಪೊಲೀಸರ ಮನಸ್ಸಿನ ಒತ್ತಡ ಕಡಿಮೆ ಮಾಡಲು ನಾನು ಮತ್ತು ನನ್ನ ತಂಡದೊಂದಿಗೆ ಟ್ರಕ್ಕಿಂಗ್ ಹೋಗುತ್ತಿದ್ದೇನೆ ಎಂದು ಮೆಲ್ಕಾರ್ ಟ್ರಾಫಿಕ್ ಎಸ್.ಐ. ಮಂಜುನಾಥ್ ತಿಳಿಸಿದ್ದಾರೆ.
ಎಸ್.ಪಿ.ಯವರ ಹೊಸ ಪ್ರಯತ್ನವಾಗಿದ್ದು ಪ್ರತಿ ವಾರ ಯೋಗ ಹೀಗೆ ವಿಭಿನ್ನ ರೀತಿಯ ಕಾರ್ಯಕ್ರಮ ಗಳ ಮೂಲಕ ಪೋಲೀಸರ ಮಾನಸಿಕ ,ದೈಹಿಕ , ಬೌದ್ಧಿಕ ಮಟ್ಟವನ್ನು ಉತ್ತಮ ಪಡಿಸುವುದು ಯೋಚನೆಯಾಗಿದೆ ಈ ಹಿನ್ನಲೆಯಲ್ಲಿ ಭಾನುವಾರ ನರಹರಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಟ್ರೆಕ್ಕಿಂಗ್ ಮೂಲಕ ಸಾಗಿ ದೇವರ ದರ್ಶನ ಪಡೆದು ಎಸ್.ಪಿ.ಯವರ ವಿಭಿನ್ನ ಯೋಚನೆಗೆ ಚಾಲನೆ ನೀಡಿದರು.