ಮಂಗಳೂರು, ಏ. 24(DaijiworldNews/AK):ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಜಿಲ್ಲೆಯ ಅಭಿವೃದ್ಧಿ ಬಗ್ಗೆ ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿದ್ದು, ಪ್ರಧಾನಿ ಮೋದಿಯವವರ ವಿಕಸಿತ ಭಾರತಕ್ಕೆ ಪೂರಕವಾಗಿ ಒಂಬತ್ತು ಅಂಶಗಳ ನವಯುಗ ನವಪಥ ಎನ್ನುವ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.
ನವಯುಗ ನವಪಥ ಎನ್ನುವ ಕಾರ್ಯಸೂಚಿಗಳ ಪಟ್ಟಿಯನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕ್ಯಾ.ಬ್ರಿಜೇಶ್ ಚೌಟ, ಈಗಾಗಲೇ ಕೈಗೆತ್ತಿಕೊಂಡಿರುವ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರೈಸುವುದು ಮತ್ತು ಇದರ ಜೊತೆಗೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಶಿರಾಡಿ ಘಾಟ್ ನಲ್ಲಿ ಆಧುನಿಕ ಮಾದರಿಯಲ್ಲಿ ಸರ್ವಋತು ರಸ್ತೆಯಾಗಿಸುವುದು ಮತ್ತು ಮಂಗಳೂರು- ಬೆಂಗಳೂರು ಮಧ್ಯೆ ಪ್ರತ್ಯೇಕ ರೈಲ್ವೇ ಹಳಿ ನಿರ್ಮಿಸುವ ಗುರಿಯಿದೆ. ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯಾದಲ್ಲಿ ಮಂಗಳೂರು ಅಭಿವೃದ್ಧಿಗೆ ವೇಗ ಸಿಗಲಿದೆ. ಮಂಗಳೂರಿನ ಬಂದರಿನ ಮೂಲಕ ಬೆಂಗಳೂರಿಗೆ ಕನೆಕ್ಟ್ ಆಗಲು ಅವಕಾಶ ಸಿಗಲಿದೆ ಎಂದರು.
ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ:
ಪ್ರಮುಖವಾಗಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೈಗಾರಿಕೆಗಳ ಸ್ಥಾಪನೆ ಆಗಬೇಕಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಆಹಾರ ಸಂಸ್ಕರಣೆ, ಜವಳಿ, ಮೀನುಗಾರಿಕೆ, ಸಮುದ್ರ ಅವಲಂಬಿತ ಉತ್ಪನ್ನಗಳ ವಿಶೇಷ ಕ್ಲಸ್ಟರ್ ಸ್ಥಾಪನೆ, ಮಹಿಳೆಯರು ಮತ್ತು ಮೀನುಗಾರ ಸಮುದಾಯಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಇಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣ ಪಡೆದವರಿಗೆ ಅವಕಾಶ ಒದಗಿಸುವುದಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸಲು ಜಾಗತಿಕ ಕಂಪನಿಗಳಿಗೆ ಆಹ್ವಾನ ನೀಡಲಾಗುವುದು.
ಸ್ಟಾರ್ಟಪ್ ಮತ್ತು ಉದ್ಯಮಶೀಲತೆಗೆ ಒತ್ತು:
ಜಿಲ್ಲೆಯಲ್ಲಿ ಉದಯೋನ್ಮುಖ ಉದ್ಯಮಿಗಳಿಗೆ ಬೆಂಬಲ ನೀಡುವ ಸಲುವಾಗಿ ಹೊಸ ಸ್ಟಾರ್ಟಪ್ ಗಳಿಗೆ ಅವಕಾಶ ನೀಡಲಾಗುವುದು. ಕಳೆದ ಕೆಲವು ದಶಕಗಳಲ್ಲಿ ವಿವಿಧ ಕಡೆ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿರುವ ದಕ್ಷಿಣ ಕನ್ನಡ ಮೂಲದ ಉದ್ಯಮಿಗಳನ್ನು ಮರಳಿ ಊರಿಗೆ ಕರೆತಂದು ಉದ್ಯಮ ಸ್ಥಾಪಿಸಲು ಪ್ರೇರಣೆ ನೀಡುವುದು, ಉದ್ಯಮಶೀಲರಾಗಲು ಉತ್ಸುಕರಾಗಿರುವ ಯುವ ಮನಸ್ಸುಗಳಿಗೆ ಪ್ರೋತ್ಸಾಹ ನೀಡಲು Be Your Own Boss ಎಂಬ ಪರಿಕಲ್ಪನೆ ಇದೆ ಎಂದರು.
ಗೇಮಿಂಗ್, ಅನಿಮೇಶನ್, ಡಿಸೈನಿಂಗ್ ಇತ್ಯಾದಿ ಸೃಜನಶೀಲ ಮತ್ತು ಸಿನಿಮಾ ಕ್ಷೇತ್ರದ ಉತ್ತೇಜನಕ್ಕಾಗಿ ಫಿಲ್ಮ್ ಸಿಟಿ ನಿರ್ಮಾಣದ ಗುರಿಯಿದೆ.
ಜಗತ್ತಿನ ಐದು ವಿಶಿಷ್ಟ ಬೀಚ್ಗಗಳಲ್ಲಿ ಸಸಿಹಿತ್ಲು
ಪ್ರವಾಸೋದ್ಯಮ ಉತ್ತೇಜನ ದೃಷ್ಟಿಯಿಂದ ಸಾಹಸ ಕ್ರೀಡೆಗಳಿಗೆ ಪೂರಕ ವಾತಾವರಣ ಕಲ್ಪಿಸಲಾಗುವುದು. ಮಂಗಳೂರಿನ ಸಸಿಹಿತ್ಲು ಬೀಚ್ ಜಗತ್ತಿನಲ್ಲೇ ಸಾಹಸ ಕ್ರೀಡೆಗಳಿಗೆ ಪೂರಕ ಆಗಬಲ್ಲ ಜಗತ್ತಿನ ಐದು ಬೀಚ್ ಗಳಲ್ಲಿ ಒಂದಾಗಿದ್ದು, ಆ ಪರಿಸರವನ್ನು ಸರಕಾರದ ವ್ಯವಸ್ಥೆಯಡಿ ಅಭಿವೃದ್ಧಿ ಪಡಿಸಲಾಗುವುದು. ಇದರೊಂದಿಗೆ ದೇಗುಲ, ಜಾನಪದ, ಆಹಾರ, ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.
ತುಳುನಾಡು ಹೆರಿಟೇಜ್ ಸೆಂಟರ್ ಸ್ಥಾಪನೆ:
ನಮ್ಮ ಜಿಲ್ಲೆಯ ಮಹಿಳೆಯರು ಆತಿಥ್ಯ, ಜವಳಿ, ಆಹಾರ, ಪ್ರವಾಸ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಉತ್ತೇಜನ ನೀಡಲಾಗುವುದು. ನಮ್ಮ ಜಿಲ್ಲೆಯ ವಿಶೇಷ ಕಲೆ, ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಲು ತುಳುನಾಡು ಹೆರಿಟೇಜ್ ಸೆಂಟರ್ ಸ್ಥಾಪನೆ ಎಂದರು.ತುಳು ಭಾಷೆಗೆ ಸ್ಥಾನ ಕೊಡಿಸುವಲ್ಲಿ ಪ್ರಯತ್ನ, ದೇಯಿ ಬೈದೆತಿ ಹೆಸರಲ್ಲಿ ಸಾಂಪ್ರದಾಯಿಕ ಔಷಧಿ ಕೇಂದ್ರ ಸ್ಥಾಪನೆಗೆ ಒತ್ತು ನೀಡಲಾಗುವುದು.
ಉನ್ನತ ಶಿಕ್ಷಣದ ಹಬ್ ಸ್ಥಾಪನೆ:
ಜಿಲ್ಲೆಯ ಜೀವನಾಡಿಯಾಗಿರುವ ಕೃಷಿ, ಹೈನುಗಾರಿಕೆ, ಮೀನುಗಾರಿಕೆಯಲ್ಲಿ ಸಮಗ್ರ ಅಭಿವೃದ್ಧಿ, ಸಮಸ್ಯೆ ಆಲಿಸುವ ಯತ್ನ, ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿ ಉನ್ನತೀಕರಿಸಲು ಪ್ರಯತ್ನ, ಮತ್ಸ್ಯೋದ್ಯಮದ ಪ್ರಗತಿ ಮೂಲಕ ನೀಲಿ ಕ್ರಾಂತಿಗೆ ಕೊಡುಗೆ ನೀಡಲು ಪ್ರೋತ್ಸಾಹ ನೀಡಲಾಗುವುದು. ನಮ್ಮ ಯುವಶಕ್ತಿ ಅತ್ಯಮೂಲ್ಯವಾಗಿದ್ದು, ಐಐಟಿಯಂತಹ ಉನ್ನತ ಶಿಕ್ಷಣಕ್ಕಾಗಿ ದೆಹಲಿ, ಮುಂಬೈ ಹೋಗುವುದನ್ನು ತಡೆಯಲು ಐಐಎಂ- ಐಐಟಿ ಸ್ಥಾಪನೆಗೆ ಪ್ರಯತ್ನ, ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಗೆ ಪೂರಕವಾಗಿ ಕ್ರೀಡಾ ಮೂಲಸೌಕರ್ಯ ಮತ್ತು ವಿಶೇಷ ತರಬೇತಿಗೆ ಆದ್ಯತೆ, ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ, ವಿವಿಧ ಕ್ಷೇತ್ರಗಳ ಜನರೊಂದಿಗೆ ಸವಾಲು, ಸಮಸ್ಯೆ ಅರಿಯಲು ನಿರಂತರ ಮುಕ್ತ ಸಂವಾದಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.
ಕರಾವಳಿ ಭದ್ರತೆಗೆ ವಿಶೇಷ ಆದ್ಯತೆ:
ಕರಾವಳಿಯಲ್ಲಿ ಪಿಎಫ್ಐನಂತಹ ದೇಶ ವಿರೋಧಿ ಸಂಘಟನೆಗಳ ನೆಲೆಗಳಿದ್ದು ಅವನ್ನು ಮೂಲೋತ್ಪಾಟನೆ ಮಾಡಲು ಸೇನೆಯಲ್ಲಿದ್ದ ಅನುಭವ ಆಧರಿಸಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗುವುದು, ಇಂಡಿಯನ್ ಕೋಸ್ಟ್ ಗಾರ್ಡ್ ಅಕಾಡೆಮಿ ಈಗಾಗಲೇ ಕೆಂಜಾರಿಗೆ ಬಂದಿದ್ದು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವುದು, ಭಯೋತ್ಪಾದನೆ ಚಟುವಟಿಕೆ ನಿಗ್ರಹಿಸಲು ಎನ್ಐಎ ಮತ್ತು ವಿಧಿವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ಭರವಸೆಯನ್ನು ಬ್ರಿಜೇಶ್ ಚೌಟ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಂಸದ ನಳಿನ್ ಕುಮಾರ್, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಚುನಾವಣಾ ಪ್ರಭಾರಿ ಗಣೇಶ್ ಕಾರ್ಣಿಕ್ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.