ಕುಂದಾಪುರ, ಏ. 23(DaijiworldNews/AK):ದೇಶ ಸುಭೀಕ್ಷವಾಗಿರಲು ಬಿಜೆಪಿ ಗೆಲುವು ಅಗತ್ಯ. ಕೋಟ ಶ್ರೀನಿವಾಸ ಪೂಜಾರಿಯವರು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಸರಳ, ಭ್ರಷ್ಟಾಚಾರ ರಹಿತ ರಾಜಕಾರಣಿ ಗೆಲ್ಲಲೇಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
ಅವರು ಮಂಗಳವಾರ ಸಂಜೆ ಇಲ್ಲಿ ಬಿಜೆಪಿ ವತಿಯಿಂದ ನಡೆದ ರ್ಯಾಲಿ ಸಮಾರೋಪದಲ್ಲಿ ನೆಹರೂ ಮೈದಾನದಲ್ಲಿ ಮಾತನಾಡಿ, ಉಡುಪಿ ಜಿಲ್ಲೆ ಎಲ್ಲ ಹಂತದ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದು ಈ ಬಾರಿಯೂ ಜನ ಗೆಲ್ಲಿಸುತ್ತಾರೆ. ದೇಶದಲ್ಲಿ ೧೧ ಕೋಟಿ ಶೌಚಾಲಯಗಳನ್ನು ಕೇಂದ್ರ ಸರಕಾರ ಕಟ್ಟಿಸಿಕೊಟ್ಟಿದ್ದರೂ ಕಾಂಗ್ರೆಸ್ನವರು ಇನ್ನೂ ಚೊಂಬು ಹಿಡಿದುಕೊಂಡು ತಿರುಗುತ್ತಿದ್ದಾರೆ. ರಾಜ್ಯದಲ್ಲಿ ೧೨ ಕಾಂಗ್ರೆಸ್ ಅಭ್ಯರ್ಥಿಗಳು ಮಂತ್ರಿಗಳ ಮನೆಯವರು. ಇಂತಹ ಪರಿವಾರವಾದ ಇನ್ಯಾವ ರಾಜ್ಯದಲ್ಲೂ ಮಾಡಿಲ್ಲ. ಆದ್ದರಿಂದ ಜನ ಕಾಂಗ್ರೆಸ್ನ್ನು ತಿರಸ್ಕರಿಸುವ ದಿನ ಬಂದಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ , ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದವರು ಮಾತನಾಡಿದರು.ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಮುಖಂಡರಾದ ಕಿದಿಯೂರು ಉದಯ ಕುಮಾರ್ ಶೆಟ್ಟಿ ಸುಪ್ರಸಾದ ಶೆಟ್ಟಿ ಬೈಕಾಡಿ, ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಸುಧೀರ್ ಕೆ.ಎಸ್., ಸತೀಶ್ ಪೂಜಾರಿ ವಕ್ವಾಡಿ ರಾಜೇಶ್ ಕಾವೇರಿ, ನಯನಾ ಗಣೇಶ್ ಮೊದಲಾದವರು ಇದ್ದರು.
ಮಾಬುಕಳದಿಂದ ಕುಂದಾಪುರವರೆಗೆ ಸಾವಿರಾರು ಬೈಕ್ಗಳಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಮಂಡಲದ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ ನಿರ್ವಹಿಸಿದರು.