ಉಳ್ಳಾಲ,ಏ. 23(DaijiworldNews/AK): ಕೇಂದ್ರದಿಂದ ರಾಜ್ಯಕ್ಕೆ ಘೋರ ಅನ್ಯಾಯ ಆಗುತ್ತಿದೆ. ಸಾಮಾನ್ಯ ಯೋಜನೆಗಳೇ ಈವರೆಗೆ ರಾಜ್ಯಕ್ಕೆ ಜಾರಿಯಾಗಿಲ್ಲ. ಕರ್ನಾಟಕದಲ್ಲಿರುವ ೨೬ ಸಂಸದರು ನಿಷ್ಪಯೋಜಕ ಹಾಗೂ ಅಸಮರ್ಥರು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ, ಕೇಂದ್ರದಿಂದ ಸಹಕಾರವೇ ಇಲ್ಲ. ಇದನ್ನು ಸರ್ವೋಚ್ಛ ನ್ಯಾಯಾಲಯವೇ ಪ್ರಶ್ನಿಸಿದೆ. ಸಾಮಾನ್ಯ ಯೋಜನೆಗಳು ಕೇಂದ್ರದಿಂದ ರಾಜ್ಯಕ್ಕೆ ಜಾರಿಯಾಗದ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕೇಂದ್ರದ ಜತೆ ಮಾತನಾಡಲು ತಾವು ಬರುವುದಾಗಿ ವಿಶ್ವಾಸ ತುಂಬಿದರೂ ಅವರು ಮನಸ್ಸೇ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಇರುವ ಸಂಬಂಧವನ್ನೇ ಉಳಿಸಿಲ್ಲ. ಇವೆಲ್ಲವನ್ನು ಗಮನಿಸುವಾಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿ ಸೀಟುಗಳನ್ನು ಗೆಲ್ಲಲಿದೆ ಎಂದರು.
16 ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸವಿತ್ತು. ಆದರೆ ಜನರ ಬೆಂಬಲ ನೋಡುವಾಗ 20 ಮೀರಿ ಸೀಟುಗಳ ಜಯವಾಗಲಿದೆ. ಮಂಗಳೂರಿನಲ್ಲಿ ಅಭ್ಯರ್ಥಿ ಚೆನ್ನಾಗಿದ್ದಾರೆ,ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರು ಗೆಲ್ಲುವುದರೊಂದಿಗೆ ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗದಲ್ಲಿ
ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನನೇ ಇಲ್ಲ ಎಂದರು.
ವಾತಾವರಣ ಬದಲಾಗಿದೆ. ಕೇಂದ್ರ ಒತ್ತಡದ ವಾತಾವರಣದಲ್ಲಿ ಸಿಲುಕಿ ಹಾಕಿದೆ. ಜನರನ್ನು ಉಸಿರುಗಟ್ಟಿದ ಸ್ಥಿತಿಯಲ್ಲಿರಿಸಿ. ದೇಶವನ್ನು ಒಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಇವೆಲ್ಲ ಜನರಿಗೇ ಸಾಕಾಗಿ ಹೋಗಿದೆ. ಪ್ರಧಾನಮಂತ್ರಿ ಭಾಷಣ ಕೇಳಿ ಜನ ಇನ್ನಷ್ಟು ಕುಗ್ಗಿಹೋಗಿದ್ದಾರೆ. ರಾಹುಲ್ ಗಾಂಧಿಯವರು ದ್ವೇಷ ಅಸೂಯೆ ವೈಮನಸ್ಸು, ಹಿಂಸಾತ್ಮಕ ವಿಚಾರಗಳಿಗೆ ಪ್ರಚೋದಿಸುವುದನ್ನು ನಿಲ್ಲಿಸಿ ಪ್ರೀತಿಸಿ, ಗೌರವಿಸಿ, ವಿಶ್ವಾಸ ಬೆಳೆಸುವ ಕಾರ್ಯಕ್ಕೆ ಮುಂದಾಗಿರಿ ಅನ್ನುವ ಸಂದೇಶದೊಂದಿಗೆ ನಡೆಸಿದ ಭಾರತ್ ಜೋಡೋ ಯಾತ್ರೆ ಜನರ ಮೇಲೆ ಪ್ರಭಾವ ಬೀರಿದೆ. ಅತಿ ಹೆಚ್ಚು ತೆರಿಗೆ ಕಟ್ಟುವ ಹಾಗೂ ಅತಿ ಹೆಚ್ಚು ಬಂಡವಾಳ ಹೂಡುವ ರಾಜ್ಯಕ್ಕೆ ಬರೀ ಚೊಂಬು ಮಾತ್ರ ಕೇಂದ್ರ ಸರಕಾರದಿಂದ ದೊರೆತಿದೆ ಎಂದರು.
ನೇಹ ಪ್ರಕರಣ ಧರ್ಮಕ್ಕೂ ರಾಜಕೀಯಕ್ಕೂ ಸಂಬಂಧವೇ ಇಲ್ಲ. ಕೆಟ್ಟ ಘಟನೆ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಯಾಗಬೇಕು.ವೋಟಿಗೋಸ್ಕರ ಯುವತಿ ಮನೆಗೆ ಹೋಗಿ ಹೇಸಿಗೆ ರಾಜಕೀಯ ಮಾಡುತ್ತಿದ್ದಾರೆ. ಮನಸ್ಸುಗಳು ಮಾಲಿನ್ಯಗೊಂಡಿದೆ. ಬಿಜೆಪಿಗೆ ಇದು ನಷ್ಟವಾಗಲಿದೆ. ಹೆಣದ ಮೇಲಿನ ರಾಜಕೀಯ ಜನರಿಗೆ ನೋಡಿ ಸಾಕಾಗಿದೆ. ಜನರ ದಾರಿತಪ್ಪಿಸಲು ಸಾಧ್ಯವಿಲ್ಲ. ದೇಶ್ಕಕೆ 187 ಲಕ್ಷ ಕೋಟಿ ಸಾಲ ಇದೆ. 10 ವರ್ಷದ ಹಿಂದೆ 50 ಲಕ್ಷ ಕೋಟಿ ಇದ್ದ ಸಾಲ ಇದೀಗ ಶೇ. 300% ಹೆಚ್ಚು ಬೆಳವಣಿಗೆ ಆಗಿದೆ.
ಶ್ರೀಮಂತರ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಸಾಮಾನ್ಯ ಜನರಿಗೆ ಭದ್ರತೆ ನೀಡುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಮಾಡುತ್ತಿದ್ದರೆ, ಅಧಾನಿ, ಅಂಬಾನಿ ರಕ್ಷಿಸುವ ಕಾರ್ಯದಲ್ಲಿ ಬಿಜೆಪಿಯಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಕಾರ್ಯಾಧ್ಯಕ್ಷ ಯು ಟಿ ಇಫ್ತಿಕರ್ ಆಲಿ, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ,ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ,ಇಸಾಕ್ ಮೇಲಂಗಡಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೆ, ಹಸೈನಾರ್ ಕೊಟೆಪುರ, ಲೆಕ್ಕ ಪರಿಶೋದಕ ಫಾರೂಕ್ ಕಲ್ಲಾಪು, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್ ಹಳೆ ಕೋಟೆ, ಪ್ರಧಾನ ಕಾರ್ಯದರ್ಶಿ ಇಂತಿಯಾಝ್ ಪಿಲಾರ್ , ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ , ಫಾರೂಕ್ ಉಳ್ಳಾಲ್ ಉಪಸ್ಥಿತರಿದ್ದರು.