ಬೈಂದೂರು, ಏ.22(DaijiworldNews/AK): ಹುಬ್ಬಳ್ಳಿಯಲ್ಲಿ ಅಮಾಯಕ ಹಿಂದೂ ಯುವತಿ ನೇಹಾಳನ್ನು ಮತಾಂಧ ಕ್ರೂರವಾಗಿ ಕೊಲೆ ಗೈದಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಕರೆಯಂತೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಬೈಂದೂರು ಮಂಡಲ ಬಿಜೆಪಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಸದರೂ ಆದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು, ತನ್ನ ಪ್ರೀತಿಯನ್ನು ಒಪ್ಪಿಲ್ಲ ಎನ್ನುವ ಕಾರಣಕ್ಕೆ ನೇಹಗಳನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಇದು ಲವ್ ಜಿಹಾದ್ ನ ಒಂದು ಭಾಗ. ಈ ಸರ್ಕಾರ ಕೊಲೆಯಾದ ನೇಹಳ ಕುಟುಂಬಕ್ಕೆ ರಕ್ಷಣೆ ನೀಡುವುದನ್ನು ಬಿಟ್ಟು ಕೊಲೆ ಮಾಡಿದವನ ಮನೆಗೆ ರಕ್ಷಣೆ ನೀಡಿದೆ. ರಾಮ ನವಮಿ ಪಾನಕ ಹಂಚಿದವರ ವಿರುದ್ಧ ಕೇಸ್ ದಾಖಲಿಸುತ್ತಾರೆ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಾಡು ಬರೆದರೆ ಹಲ್ಲೆ ಮಾಡುತ್ತಾರೆ. ಮಡಿಕೇರಿಯ ಕುಟ್ಟಪ್ಪ, ಶಿವಮೊಗ್ಗದ ಹರ್ಷ, ಭಟ್ಕಳ ಸಮೀಪದ ಪರೇಶ್ ಮೆಸ್ತಾ ಹೀಗೆ ನಮ್ಮ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದ್ದೇವೆ. ಇದೆಲ್ಲದಕ್ಕೂ ಉತ್ತರ ನೀಡಲೇ ಬೇಕು. ವೋಟಿನ ತುಷ್ಠೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಹಿಂದೂಗಳ ಒಳ್ಳೆತನದ ನಡವಳಿಕೆ ದೌರ್ಬಲ್ಯ ಅಲ್ಲ. ಈ ಘಟನೆಗೆ ಹಿಂದೂ ಸಮಾಜ ಸರಿಯಾದ ಉತ್ತರ ನೀಡಲಿದೆ. ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಮತದಾರರು ಚೊಂಬು ಕೊಟ್ಟು ಮನೆಗೆ ಕಳುಹಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕರಾದ ಗುರುರಾಜ ಗಂಟಿಹೊಳೆಯವರು, ನಾವು ಮೇರಾ ನಯಾಜ್, ಮೇರಾ ಫಾಯಜ್, ಮೇರಾ ಅಬ್ದುಲ್ಲಾ ಐಸಾ ನಹಿ ಹೇ ಎನ್ನುತ್ತಲೇ ಇದ್ದೇವೆ. ಆದರೆ, ನಯಾಜ್, ಫಯಾಜ್, ಅಬ್ದುಲ್ಲಾರಿಗೆ ತಾವು ಏನೆಂಬುದು ಗೊತ್ತಿದೆ. ಆದರೆ ಹಿಂದೂ ಸಮಾಜಕ್ಕೆ ಇದು ತಿಳಿಯುತ್ತಿಲ್ಲ. ಪ್ರೀತಿ ಒಪ್ಪಿಕೊಂಡಿಲ್ಲ ಎಂದರೆ ಚಾಕು ಹಾಕುತ್ತಾರೆ, ಪ್ರೀತಿ ಒಪ್ಪಿಕೊಂಡರೆ ಸೂಟ್ ಕೇಸ್ ಗೆ ಹಾಕುತ್ತಾರೆ. ಇದು ಯಾವಾಗ ನಿಲ್ಲುತ್ತದೆ ಎಂಬುದೇ ತಿಳಿಯದಾಗಿದೆ ಎಂದರು.
ಇದೆಲ್ಲಕ್ಕಿಂತ ದುರಂತ ಏನೆಂದರೆ, ಫಯಾಜ್, ನಯಾಜ್ , ಅಬ್ದುಲ್ಲಾ ಮೊದಲಾದವರು ಕಾಂಗ್ರೆಸ್ ಸರ್ಕಾರ ಬಂದಾಗ ಆಕ್ಟೀವ್ ಆಗುತ್ತಾರೆ. ಇದೇ ಕೃತ್ಯ ಉತ್ತರ ಪ್ರದೇಶದಲ್ಲಿ ಆಗಿದ್ದರೆ ಬುಲ್ಡೇಜರ್ ಏನ್ ಕೆಲಸ ಮಾಡಬೇಕೋ ಅದನ್ನು 24 ಗಂಟೆಯ ಒಳಗೆ ಮಾಡುತಿತ್ತು. ನಮ್ಮಲ್ಲಿ ಸರ್ಕಾರ ಆ ಬುಲ್ಡೇಜರ್ ಅನ್ನು ಫಯಾಜ್ ನ ಮನೆ ಕಾಯಲು ನಿಲ್ಲಿಸಿದೆ. ಹಿಂದೂ ಸಮಾಜ ಎಚ್ಚೆತ್ತುಕೊಂಡಾಗ ಮಾತ್ರ ಇದಕ್ಕೆಲ್ಲ ಉತ್ತರ ಸಿಗಲಿದೆ. ಬಿಜೆಪಿಯವರು ಯಾರನ್ನು ಟಾರ್ಗೆಟ್ ಮಾಡ್ತಾ ಇಲ್ಲ ಎಂದು ಹೇಳಿದರು.
ಹಿಂದೂಗಳನ್ನು ರಕ್ಷಣೆ ಮಾಡುವುದು ಅವಶ್ಯಕ. ನಮ್ಮಲ್ಲಿಯೇ ಈ ಜಾಗೃತಿ ಬಾರದೇ ಇದ್ದರೆ ಮುಂದೆ ನಮ್ಮ ಮಕ್ಕಳನ್ನು, ಸಮಾಜ, ಸಂಸ್ಕೃತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹಿಂದೂಗಳು ಒಟ್ಟಾಗಿ ಕಾಂಗ್ರೆಸ್ ಗೆ ಬುದ್ದಿ ಕಲಿಸುವವರೆಗೂ ಇದು ಬದಲಾಗುವುದಿಲ್ಲ. ನಯಾಜ್, ಫಯಾಜ್ ಗೆ ಬುದ್ದಿ ಕಲಿಸದೇ ಒದ್ದರೆ, ಬುಲ್ಡೇಜರ್ ಓಡಿಸದೇ ಇದ್ದರೆ ಹಿಂದೂ ಸಮಾಜಕ್ಕೆ ಕಷ್ಟ ಇದೇ ಎಂಬ ಎಚ್ಚರಿಕೆ ಸಂದೇಶ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.