ಕೋಟ, ಏ.22(DaijiworldNews/AA): ಕೇರಳದ ಹೆಸರಾಂತ ಮಲಯಾಳಂ ಚಿತ್ರ ನಿರ್ಮಾಪಕರೊಬ್ಬರ ಮನೆಯಲ್ಲಿ ಕದ್ದ ಚಿನ್ನಾಭರಣಗಳನ್ನು ಉಡುಪಿ-ಕಾರವಾರ ಮಾರ್ಗವಾಗಿ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯಿಂದ 1.2 ಕೆ.ಜಿ. ಚಿನ್ನ ವಶಕ್ಕೆ ಪಡೆದ ಘಟನೆ ಕೋಟ ಮೂರ್ಕೈ ಸಮೀಪ ಶನಿವಾರ ನಡೆದಿದೆ.
ಬಂಧಿತನನ್ನು ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮೊಹಮ್ಮದ್ ಇರ್ಫಾನ್ (35) ಎಂದು ಗುರುತಿಸಲಾಗಿದೆ.
ಮಲಯಾಳಂ ಚಿತ್ರ ನಿರ್ಮಾಪಕ ಜೋಶಿ ಅವರ ಕೊಚ್ಚಿ ಪನಂಪಲ್ಲಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಕೋಣೆಯ ಬಾಗಿಲು ಮುರಿದು ಬಂಧಿತ ಆರೋಪಿ ಒಳ ನುಗ್ಗಿದ್ದಾನೆ. ಬಳಿಕ ಕಪಾಟನ್ನು ಒಡೆದ ಆರೋಪಿ 10 ವಜ್ರದ ಉಂಗುರ, 12 ವಜ್ರದ ಕಿವಿಯೋಲೆ, 2 ಚಿನ್ನದ ಉಂಗುರ, 10 ಚಿನ್ನದ ನೆಕ್ಲೆಸ್, 10 ಚಿನ್ನದ ಬಳೆ, 10 ಕೈಗಡಿಯಾರ ಸಹಿತ 1 ಕೋಟಿ ರೂ. ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.
ಇನ್ನು ಆರೋಪಿಯು ಕಳವುಗೈದ ಚಿನ್ನಾಭರಣವನ್ನು ಬಿಹಾರಕ್ಕೆ ಸಾಗಿಸುವ ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕೋಟ ಠಾಣಾ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಕಳವು ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಆರೋಪಿಯನ್ನು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಹಾಗೂ ಕೇರಳ ಪೊಲೀಸರು ಉಡುಪಿ ಜಿಲ್ಲೆಗೆ ಆಗಮಿಸಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.