ಬಂಟ್ವಾಳ, ಏ.21(DaijiworldNews/AA): ಬೈಕ್ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಾದಾಚಾರಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ನಾಗರಾಜ (55) ಅಪಘಾತಕ್ಕೊಳಗಾಗಿ ಮೃತಪಟ್ಟ ದುರ್ದೈವಿ.
ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಬೈಕ್ ಸವಾರನೋರ್ವ ತುಂಬೆ ವೈಶಾಲಿ ವೈನ್ಸ್ ನ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗರಾಜ ಅವರಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ಪರಿಣಾಮ ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯವಾಗಿದೆ. ಹಾಗೂ ಪಾದಾಚಾರಿ ನಾಗರಾಜ ಅವರ ತಲೆ, ಮುಖ ಹಾಗೂ ಕಾಲುಗಳಿಗೆ ಗಾಯವಾಗಿದ್ದು, ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಘಟನೆಗೆ ಬೈಕ್ ಸವಾರ ಅಜಾಗರೂಕತೆಯ ಚಾಲನೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.