ಉಡುಪಿ, ಮೇ 05 (DaijiworldNews/SM): ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆಯಿಂದಲೇ ಪರಿಕ್ಷಾ ಕೇಂದ್ರಕ್ಕೆ ತೆರಳಿ ನೀಟ್ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ಎಸ್.ಸುಚೇತಾ ಎಂಬ ವಿದ್ಯಾರ್ಥಿನಿ ಆಂಬುಲೆನ್ಸ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ನೀಟ್ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆ ಮುಗಿಸಿ ಆಂಬುಲೆನ್ಸ್ನಲ್ಲಿಯೇ ಮರಳಿ ಆಸ್ಪತ್ರೆಗೆ ತೆರಳಿದ್ದಾರೆ. ಹೊನ್ನಾವರದ ಮಂಕಿಯ ಸುರೇಶ್ ನಾಯಕ್ ಅವರ ಪುತ್ರಿಯಾಗಿರುವ ಸುಚೇತಾ ಕುಂದಾಪುರದ ಎಕ್ಸ್ಲೆಂಟ್ ಕಾಲೇಜು ವಿದ್ಯಾರ್ಥಿನಿ.
ಮೇ 1ರಂದು ಬ್ರಹ್ಮಾವರದ ಚೇರ್ಕಾಡಿ ಬಳಿ ಸುಚೇತಾಗೆ ಅಪಘಾತವಾಗಿ, ಕಾಲಿನ ಮೂಳೆ ಮುರಿದಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನೀಟ್ ಪರೀಕ್ಷೆ ಬರೆಯಲೇಬೇಕು ಎಂದು ಪಟ್ಟುಹಿಡಿದಿದ ಸುಚೇತಾಗೆ ಆಸ್ಪತ್ರೆಯಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಮಣಿಪಾಲದಲ್ಲಿರುವ ಮಾಧವ ಕೃಪಾ ಪರೀಕ್ಷಾ ಕೇಂದ್ರದ ಸಿಬ್ಬಂದಿಯೂ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆ ಬರೆಯಲು ನೆರವು ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುಚೇತಾ, ‘ನೀಟ್ ಪರೀಕ್ಷೆಗೆ ಅಗತ್ಯ ತಯಾರಿ ಮಾಡಿಕೊಂಡಿದ್ದೆ. ದುರದೃಷ್ಟವಶಾತ್ ಅಪಘಾತವಾಯಿತು. ದೇವರ ದಯೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಸುಚೇತಾ ಜತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅನಘ ಎಂಬ ವಿದ್ಯಾರ್ಥಿನಿಯೂ ಕೂಡ ಪೋಷಕರ ಜತೆಯಲ್ಲಿ ಬಂದು ಮಾಧವ ಕೃಪ ಶಾಲೆಯಲ್ಲಿ ಪರೀಕ್ಷೆ ಬರೆದರು.