ಕುಂದಾಪುರ, ಏ. 21(DaijiworldNews/AK): ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ನೇತೃತ್ವದಲ್ಲಿ ಕುಂದಾಪುರದ ಮಹಾತ್ಮಾ ಗಾಂಧಿ ಪಾರ್ಕ್ನ ಬಾಲಭವನದಲ್ಲಿ ನಡೆಯುತ್ತಿರುವ ರಂಗರಂಗು ಮಕ್ಕಳ ರಜಾಮೇಳ ಬೇಸಿಗೆ ಶಿಬಿರದಲ್ಲಿ ಎ.20ರಂದು ಮಕ್ಕಳ ಸಂತೆ-2024 ನಡೆಯಿತು.
<
https://daijiworld.ap-south-1.linodeobjects.com/Linode/images3/arun_210424_santhe9.jpg>
https://daijiworld.ap-south-1.linodeobjects.com/Linode/images3/arun_210424_santhe8.jpg>
ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ‘ಗಾಂಧಿ ಪಾರ್ಕಿನ ಹೊಸ ಹೂಗಳು’ ಮಕ್ಕಳ ಸೃಜನಶೀಲ ಬರವಣಿಗೆಗಳ ಪುಸ್ತಕವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಿನಿಮಾ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅನಾವರಣಗೊಳಿಸಿ ಸಮುದಾಯ ಸಾಂಸ್ಕೃತಿಕ ಸಂಘಟನೆ ರಂಗರಂಗು ಎನ್ನುವ ವಿಶಿಷ್ಠವಾದ ಬೇಸಿಗೆ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ. ಇದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತಿದೆ. ಕಲೆ, ಸಂಸ್ಕೃತಿ, ಸಾಂಸ್ಕೃತಿಕೆ, ಕೌಶಲ್ಯ, ಅಭಿನಯ, ವ್ಯವಹಾರ ಜ್ಞಾನ ಹೀಗೆ ಎಲ್ಲವನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗುತ್ತಿದೆ ಎಂದು ಹೇಳಿದ ಅವರು, ಕನ್ನಡವೆಂದರೆ ಅದು ಶಕ್ತಿ. ಕನ್ನಡದ ಅಕ್ಷರಗಳಲ್ಲಿ ಅದ್ಬುತವಾದ ಸಾಮಥ್ರ್ಯವಿದೆ. ನಾನು ಕನ್ನಡದ ಪುಸ್ತಕಗಳನ್ನು ಓದುತ್ತಲೇ ಬೆಳೆದವ. ಕೇವಲ ಕನ್ನಡ ಒಂದೇ ಭಾಷೆಯ ಪ್ರಭುತ್ವದಿಂದ ವಿಶ್ವದ ಹಲವಾರು ದೇಶಗಳನ್ನು ಸಂಚರಿಸಿದೆ. ನಮ್ಮ ಮಾತೃಭಾಷೆ ಕನ್ನಡವನ್ನು ಕಡೆಗಣಿಸಬಾರದು ಎಂದರು.
ಕುಂದಾಪುರದ ಶೇಟ್ ಜ್ಯುವೆಲ್ಲರ್ಸ್ನ ಸುಧೀಂದ್ರ ಶೇಟ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ‘ಗಾಂಧಿ ಪಾರ್ಕಿನ ಹೊಸ ಹೂಗಳು’ ಪುಸ್ತಕ ನಿರ್ಮಾಣದಲ್ಲಿ ಸಹಕರಿಸಿದ ರಮೇಶ ಗುಲ್ವಾಡಿ, ಗಣೇಶ ಶೆಟ್ಟಿ, ಸಮುದಾಯ ಸಂಘಟನೆಯ ಸದಾನಂದ ಬೈಂದೂರು, ಜಿ.ವಿ ಕಾರಂತ, ವಾಸುದೇವ ಗಂಗೇರ, ಸಮುದಾಯದ ಸದಸ್ಯರು, ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಉದಯ ಶೆಟ್ಟಿ ಪಡುಕೆರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.
ಮಕ್ಕಳಲ್ಲಿ ವ್ಯವಹಾರ ಪ್ರಜ್ಞೆ ಮೂಡಿಸಿದ ಮಕ್ಕಳ ಸಂತೆ:
ರಂಗರಂಗು ಮಕ್ಕಳ ರಜಾಮೇಳ ಬೇಸಿಗೆ ಶಿಬಿರದಲ್ಲಿ ಪ್ರತಿವರ್ಷವೂ ಮಕ್ಕಳ ಸಂತೆ ಎನ್ನುವ ವಿಶಿಷ್ಟವಾದ ವಿಷಯವಿರುತ್ತದೆ. ವಾಣಿಜ್ಯ ಪ್ರಪಂಚವನ್ನು ಮಕ್ಕಳು ತಿಳಿದುಕೊಳ್ಳುವುದು ಇದರ ಉದ್ದೇಶ. ಇಲ್ಲಿ ಮಕ್ಕಳು ವಿವಿಧ ರೀತಿಯ ವ್ಯಾಪಾರದ ಮಳಿಗೆಗಳನ್ನು ತೆರೆದಿರುತ್ತಾರೆ. ಸಾರ್ವಜನಿಕರು ಖರೀದಿಸುವ ಮೂಲಕ ಬಾಲ ವ್ಯಾಪಾರಿಗಳನ್ನು ಪ್ರೋತ್ಸಾಹಿಸುತ್ತಾರೆ.
ಈ ಬಾರಿಯೂ ಕೂಡಾ ಬಾಲ ವ್ಯಾಪಾರಿಗಳು ಬಹು ಉತ್ಸಾಹದಿಂದಲೇ ಪಾಲ್ಗೊಂಡಿರುವುದು ಕಂಡು ಬಂತು. ಪುಟ್ಟ ಪುಟ್ಟ ಮಕ್ಕಳು ಕೂಡಾ ಅಂಗಡಿ ತೆರೆದಿರುವುದು ವಿಶೇಷ. ಗೋಲಿ ಸೋಡ, ಪೆನ್ನು ಪೆನ್ಸಿಲ್ ಬರವಣಿಗೆ ಪರಿಕರಗಳ ಅಂಗಡಿ, ಪಾಸ್ಟ್ ಫುಡ್, ಮಂಡಕ್ಕಿ ಉಪ್ಕರಿ, ಹಲಸು, ಮಾವು, ಕಿತ್ತಳೆ, ಕಲ್ಲಂಗಡಿ, ಪನ್ನೇರಳೆ, ಪಪ್ಪಾಯ ಹಣ್ಣುಗಳ ಅಂಗಡಿ, ಸೊಪ್ಪು ತರಕಾರಿ ಅಂಗಡಿ, ಸಿಹಿ ತಿಂಡಿಗಳ ಅಂಗಡಿ, ಅಕ್ವೇರಿಯಂ ಮೀನುಮರಿ ಮಾರಾಟ, ಹಪ್ಪಳ, ಉಪ್ಪಿನಕಾಯಿ, ಮುಖವಾಡಗಳು, ಬಳೆ ಅಂಗಡಿ, ವಿವಿಧ ರೀತಿಯ ತಂಪು ಪಾನೀಯಗಳು, ತೆಂಗಿನ ಕಾಯಿ ಮೊದಲಾದ ಸ್ಟಾಲ್ ಗಳು ಗಮನ ಸೆಳೆದವು.