ಉಳ್ಳಾಲ, ಏ.20(DaijiworldNews/AA): ರಾಜೇಶ್ ಕೋಟ್ಯಾನ್ ಯಾನೆ ರಾಜು ಕೋಟ್ಯಾನ್ ಎಂಬುವವರ ಕೊಲೆ ನಡೆಸಿದ್ದ 4 ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ:
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರ ಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ ಯಾನೆ ರಾಜು ಕೋಟ್ಯಾನ್ ಎಂಬವರನ್ನು 2016ರ ಎಪ್ರಿಲ್ 12 ರಂದು ಆರೋಪಿಗಳು ಬೆಳಗ್ಗಿನ ಜಾವ ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಫ್ಯಾಕ್ಟರಿಯ ಬಳಿ ಮರದ ಕಟ್ಟಿಗೆಗಳಿಂದ ಹೊಡೆದು ಮುಖಕ್ಕೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಲಂ: 302, 201 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.
ಈ ಘಟನೆ ಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಆಸೀಫ್ ಯಾನೆ ಆಚಿ , ಮೊಹಮ್ಮದ್ ಸುಹೈಲ್ , ಅಬ್ದುಲ್ ಮುತಾಲಿಫ್ ಯಾನೆ ಮುತ್ತು, ಅಬ್ದುಲ್ ಅಸ್ವೀರ್ ಯಾನೆ ಅಸ್ವೀರ್ ಯಾನೆ ಅಚ್ಚು ಎಂಬವರನ್ನು ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ಭೇದಿಸಿದ್ದರು. ಆ ಪ್ರಕರಣದ ತನಿಖೆಯನ್ನು ಅಂದಿನ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಅಶೋಕ್ ಪಿ ರವರು ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ನಾಲ್ಕು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25,000 ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕರಾದ ಜುಡಿತ್ ವೋಲ್ಗಾ ಮಾರ್ಗರೇಟ್ ಕ್ರಾಸ್ತ ರವರು ವಾದವನ್ನು ಮಂಡಿಸಿದರು.