ಉಡುಪಿ/ದ.ಕ: ಕಾವೇರಿದ ಬಿಸಿಲಿನಿಂದ ಕಂಗೆಟ್ಟ ಕರಾವಳಿಯ ಕೃಷಿಕರಿಗೆ ಹಾಗೂ ಜನತೆಗೆ ನಿನ್ನೆ ಹಾಗೂ ಇಂದು ಸುರಿದ ಮಳೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಅರ್ಧಂಬರ್ಧ ಕಾಮಗಾರಿಯ ರಸ್ತೆಗಳು ಸುರಿದ ಮಳೆಯಿಂದ ಕೆಸರುಮ,ಹೊಂಡಮಯವಾಗಿದ್ದು ಸವಾರರೂ ಸಾವರಿಸಿಕೊಂಡು ಸಂಚರಿಸುವ ಪ್ರಮೇಯ ಬಂದೊಂದಗಿದೆ.
ಕಳೆದ ಒಂದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ 73 ರಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯನ್ನು ಸಂಪೂರ್ಣ ಅಗೆದು ಮಣ್ಣಿನ ರಸ್ತೆಯಾಗಿಸಿದ್ದರಿಂದ ಹೆದ್ದಾರಿ ಸಂಚಾರ ಸಂಪೂರ್ಣ ಧೂಳುಮಯವಾಗಿ ರಸ್ತೆ ಸಂಚಾರ ಪ್ರಯಾಸವಾಗಿತ್ತು. ಆದರೆ ಬೇಸಿಗೆಯ ಮಳೆ ಸುರಿದ ಪರಿಣಾಮ ರಸ್ತೆ ಕೆಸರುಮಯವಾಗಿರುವುದಲ್ಲದೆ ವಾಹನ ಸವಾರರು ಜೀವಭಯದಲ್ಲಿ ಜಾರುರಸ್ತೆಯಲ್ಲಿ ಸಂಚಕಾರದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಬಂದೊಂದಗಿದೆ.
ಅವೈಜ್ಞಾನಿಕ ಅಭಿವೃದ್ಧಿಗೆ ನೇರವಾಗಿ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ಹೊಣೆಯಾಗಿದೆ. ರಸ್ತೆ ನಿರ್ಮಿಸುವಾಗ ಒಂದು ಬದಿ ರಸ್ತೆ ನಿರ್ಮಿಸಿ ಬಳಿಕ ಮತ್ತೊಂದು ಭಾಗ ನಿರ್ಮಿಸಲಾಗುತ್ತದೆ. ಉಜಿರೆಯಿಂದ ಸಾಗುವ ರಸ್ತೆ ಮುಂಡಾಜೆ ಸಿಟಿಯವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಿಂದ ಗ್ರಾಮಸ್ಥರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಉಡುಪಿ:
ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಪಂಜಿಮಾರು ಬಸ್ ನಿಲ್ದಾಣದಿಂದ ಮುಂದಕ್ಕೆ ಇರುವ ಕೋಡು-ಪಂಜಿಮಾರು ತಿರುವಿನಲ್ಲಿ ರಸ್ತೆ ಎತ್ತರಿಸಿ ಮೋರಿ ಕಾಮಗಾರಿ ನಡೆಯುತ್ತಿದ್ದು ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಕೆಸರುಮಯವಾಗಿ ಜಾರುತ್ತಿದ್ದು, ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.ಕೋಡು-ಪಂಜಿಮಾರು ತಿರುವಿನ ಇಳಿಜಾರಿನ ರಸ್ತೆಯಲ್ಲಿ ಮೋರಿ ನಿರ್ಮಿಸಿ ರಸ್ತೆ ಎತ್ತರಿಸಲು ಮೋರಿಯ ಇಕ್ಕೆಲದಲ್ಲಿ ಮಣ್ಣು ತುಂಬಿಸಲಾಗಿತ್ತು. ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಕೆಸರುಮಯವಾಗಿ ಆವಾಂತರ ಸೃಷ್ಠಿಯಾಗಿದೆ.
ಉಡುಪಿ ನಗರ ಪಾಲಿಕೆ ವ್ಯಾಪ್ತಿಯ ಕಾಡಬೆಟ್ಟು ವ್ಯಾಪ್ತಿಯ ರಮ್ಮಣ್ಣ ಶೆಟ್ಟಿ ಬಡಾವಣೆಯಲ್ಲಿ ಚರಂಡಿ ದುರಸ್ತಿ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ.ಕಾಡಬೆಟ್ಟು ದುರಸ್ತಿಯಲ್ಲಿ ಚರಂಡಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಏಕಾಏಕಿ ಸುರಿದ ಮಳೆಯಿಂದಾಗಿ ನಡೆಯುತ್ತಿರುವ ಚರಂಡಿಗೆ ಮಳೆ ನೀರು ನುಗ್ಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಅವಾಂತರದಿಂದ ಸ್ಥಳೀಯರು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ.ಈ ಭಾಗದಲ್ಲಿ ರಸ್ತೆಯ ಮಧ್ಯದಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿವೆ.