ಮಂಗಳೂರು/ಉಡುಪಿ, ಏ 20 (DaijiworldNews/MS): ಬಿಸಿಲ ಬೇಗೆ, ವಿಪರೀತ ಸೆಕೆಯಿಂದ ತತ್ತರಿಸಿದ್ದ ಕರಾವಳಿಯ ಜನತೆಗೆ ಇಂದು ಮುಂಜಾನೆ ಸುರಿದ ಭಾರೀ ಮಳೆ ತಂಪೆರೆದಿದೆ. ದ.ಕ ಹಾಗೂ ಉಡುಪಿಯ ಹಲವೆಡೆ ಶನಿವಾರ ಮುಂಜಾನೆ 2 ಗಂಟೆಗೂ ಅಧಿಕ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆಯ ವೇಳೆ ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಇಂದು ಮುಂಜಾನೆ ಗಾಳಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಹಲವೆಡೆ ಮರಗಳು ಉರುಳಿಬಿದ್ದಿವೆ. ಪರಿಣಾಮ ರಾತ್ರಿ ಸ್ಥಗಿತಗೊಂಡಿದ್ದ ವಿದ್ಯುತ್ ಪೂರೈಕೆ ಬೆಳಗ್ಗೆವರೆಗೂ ವ್ಯತ್ಯಯವಾಗಿತ್ತು.
ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಇಂದು ಬೆಳಗ್ಗೆ 7 ಗಂಟೆಗೆ ಹೊರಡಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.