ಬೆಳ್ಮಣ್, ಮೇ05 (DaijiworldNews/SM): ಸಾಧನೆಗೆ ಬಡತನ ಅಡ್ಡಿಯಾಗದು ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ. ಬಡತನವನ್ನು ಮೆಟ್ಟಿನಿಂತು ಸತತ ಪರಿಶ್ರಮದಿಂದ ಹಾಗೂ ನಿರಂತರ ಶ್ರಮದಿಂದಾಗಿ ಕಾರ್ಕಳದ ಬಾಲಕನೋರ್ವ ಎಸ್ ಎಸ್ ಎಲ್ ಸಿಯಲ್ಲಿ ಸಾಧನೆ ಮೆರೆದಿದ್ದಾನೆ.
ರಜಾ ಸಂದರ್ಭಗಳಲ್ಲಿ ಹೂವಿನ ಕಟ್ಟೆಯಲ್ಲಿ ಹಾಗೂ ಕ್ಯಾಟರಿಂಗ್ನಲ್ಲಿ ದುಡಿಯುತ್ತಿದ್ದ ಬಾಲಕ ಕಷ್ಟದ ಜೀವನದ ನಡುವೆಯೂ ಈ ಬಾರಿಯ ಎಸ್.ಎಸ್.ಎಲ್ ಎಸಿ ಪರೀಕ್ಷೆಯಲ್ಲಿ 565 ಅಂಕ ಪಡೆದು ವಿಶೇಷ ಸಾಧನೆ ಮೆರೆದಿದ್ದಾನೆ. ಕಾರ್ಕಳ ತಾಲೂಕಿನ ಇನ್ನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಂತೂರು ಕೊಪ್ಪಳ ನಿವಾಸಿ ಬಾಬು ಪಾಂಗಳ ಹಾಗೂ ಶರ್ಮಿಳಾ ದಂಪತಿಯ ಪುತ್ರ ಸೃಜನ್ ಈ ಸಾಧನೆಯ ಶಿಖರವನ್ನೇರಿರುವ ಬಾಲಕ.
ಬೆಳ್ಮಣ್ ನ ಸಂತ ಜೋಸೆಫರ ಕನ್ನಡ ಮಾಧ್ಯಮ ಪ್ರೌಡ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ ಸೃಜನ್ ಯಾವುದೇ ಕೋಚಿಂಗ್ ಕ್ಲಸ್ಗೆ ಅಥವಾ ತರಬೇತಿಯನ್ನು ಪಡೆಯದೆ ಶೇಖಡಾ 90 ಅಂಕವನ್ನು ಪಡೆದಿದ್ದಾನೆ. ಬರೀ ಶಾಲೆಯಲ್ಲಿ ಶಿಕ್ಷಕರು ಕಲಿಸುತ್ತಿದ್ದ ಪಾಠವನ್ನು ಮನದಟ್ಟು ಮಾಡಿಕೊಂಡು ಈ ಸಾಧನೆಯನ್ನು ಮೆರೆದಿದ್ದಾನೆ.
ಈತನ ತಂದೆ ಹಾಗೂ ತಾಯಿ ಕೂಲಿ ಕೆಲಸವನ್ನು ಮಾಡಿಕೊಂಡು ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇದರ ಮಧ್ಯೆ ಮಗ ಉತ್ತಮ ಅಂಕವನ್ನು ಗಳಿಸಿರುವುದು ಹೆತ್ತವರಿಗೆ ಖುಷಿ ತಂದಿದೆ. ಸೃಜನ್ ತನ್ನ ಶಾಲಾ ರಜಾ ಸಂದರ್ಭ ಹೂವಿನ ಕಟ್ಟೆಯಲ್ಲಿ ದುಡಿಯುತ್ತಾನೆ ಜೊತೆಗೆ ಶಿರ್ವದಲ್ಲಿರುವ ಕ್ಯಾಟರಿಂಗ್ ನಲ್ಲಿಯೂ ಕೆಲಸವನ್ನು ಮಾಡಿಕೊಂಡು ವಿದ್ಯಾಭ್ಯಾಸವನ್ನು ಮಾಡಿಕೊಂಡಿದ್ದಾನೆ. ಮನೆಯಲ್ಲಿ ಪೋಷಕರ ಸಹಕಾರ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುವ ಸೃಜನ್.ಬಿ. ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾನೆ.
ಪ್ರಥಮ ಭಾಷೆ ಕನ್ನಡದಲ್ಲಿ 118, ಇಂಗ್ಲೀಷ್ 98, ಹಿಂದಿ 93, ಗಣಿತ-92, ವಿಜ್ಞಾನ -79, ಹಾಗೂ ಸಮಾಜ ವಿಜ್ಞಾನದಲ್ಲಿ 85 ಅಂಕಗಳು ಸೇರಿದಂತೆ ಒಟ್ಟು 625ರಲ್ಲಿ 565 ಅಂಕವನ್ನು ಪಡೆದಿದ್ದಾನೆ.
ಎಸ್.ಎಸ್.ಎಲ್.ಸಿ ಯಲ್ಲಿ ೫೬೫ ಅಂಕವನ್ನು ಗಳಿಸಿರುವ ಸೃಜನ್ ಬಿ, ಮುಂದೆ ಡಿಗ್ರಿಯನ್ನು ಪೂರೈಸಿ ಬಳಿಕ ಸಿ.ಎ. ಓದುವ ಕನಸು ಹೊತ್ತುಕೊಂಡಿದ್ದಾನೆ. ಇದಕ್ಕೆ ಹೆತ್ತವರು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ವಿದ್ಯಾಭಿಮಾನಿಗಳು ಈ ಬಡ ಕುಟುಂಬದಲ್ಲಿ ಅರಳಿದ ಪ್ರತಿಭೆಯನ್ನು ಪೋಷಿಸಲು ಸಹಕರಿಸಿದ್ದಲ್ಲಿ ಮುಂದೆ ಸಾಧನೆಯ ಉತ್ತುಂಗಕ್ಕೆರುವುದರಲ್ಲಿ ಯಾವುದೇ ಸಂಶಯವಿಲ್ಲ.