ಬಜ್ಪೆ, ಏ. 19(DaijiworldNews/AA): ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಬೃಹತ್ ಲಾರಿಯೊಂದರ ಬ್ರೇಕ್ ಫೇಲ್ ಆಗಿ ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೆ ಗುದ್ದಿ ಬಳಿಕ ಖಾಸಗಿ ಬಸ್, ಲಾರಿ ಮತ್ತು ಹಲವು ವಾಹನಗಳಿಗೆ ಗುದ್ದಿ ಪಲ್ಟಿಯಾದ ಘಟನೆ ಬಜ್ಪೆ ಎಡಪದವು ಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿ ಈ ಅವಘಡ ಸಂಭವಿಸಿದೆ. ಬ್ರೇಕ್ ಫೇಲ್ ಆದ ಲಾರಿಯನ್ನು ನಿಲ್ಲಿಸಲಾಗದೇ ಚಾಲಕ ಸುಮಾರು 500 ಮೀಟರ್ ದೂರದ ವರೆಗೂ ಲಾರಿಯನ್ನು ನಿಯಂತ್ರಿಸಲು ಪ್ರಯತ್ನ ಮಾಡಿದ್ದಾನೆ. ಆದರೆ ಈ ಮಧ್ಯೆ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿದೆ.
ಅಪಘಾತದಲ್ಲಿ ಲಾರಿಯ ಎದುರಿಗೆ ಮೊದಲು ಸಿಕ್ಕ ಸ್ವಿಫ್ಟ್ ಕಾರೊಂದಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಬಳಿಕ ಎಣ್ಣೆ ಪೂರೈಕೆ ಮಾಡುತ್ತಿದ್ದ ಪಿಕ್ಅಫ್ ವಾಹನಕ್ಕೆ ಲಾರಿ ಡಿಕ್ಕಿಯಾಗಿದ್ದು, ರಸ್ತೆಗೆ ಪಿಕ್ ಅಪ್ ಉರುಳಿ ಬಿದ್ದಿದೆ. ಪರಿಣಾಮ ಎಣ್ಣೆ ಪ್ಯಾಕೆಟ್ ಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬಾ ಬಿದ್ದಿದೆ. ನಂತರ ಎದುರಿನಿಂದ ಬಂದ ಟ್ಯಾಂಕರ್ ಲಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಬಳಿಕ ಲಾರಿಯು ಎಡಪದವು ಪೇಟೆಯ ಬಳಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ನಿಂತಿದೆ. ಆದರೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಖಾಸಗಿ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡದಲ್ಲಿ ಲಾರಿ ಕಟ್ಟಡವೊಂದಕ್ಕೆ ಗುದ್ದಿದ ಪರಿಣಾಮ ಮೂರು ಅಂಗಡಿಗಳಿಗೆ ಭಾರಿ ಹಾನಿ ಉಂಟಾಗಿದೆ. ಜೊತೆಗೆ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ನಾಲ್ಕು ಸ್ಕೂಟರ್ ಗಳು ಜಖಂಗೊಂಡಿದೆ.
ಬ್ರೇಕ್ ಫೇಲ್ ಆದ ಲಾರಿಯ ಚಾಲಕ ಮತ್ತು ಮತ್ತೊಂದು ಲಾರಿಯ ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಬಜ್ಪೆ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.