ಮಂಗಳೂರು, ಏ 19 (DaijiworldNews/MS): 2024 ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು ಹಾಗೂ ಶೇಕಡ 40ಕ್ಕೂ ಹೆಚ್ಚು ವಿಕಲಾಂಗತೆ ಹೊಂದಿರುವ ದಿವ್ಯಾಂಗ ಮತದಾರರು ಮನೆಯಿಂದಲೇ ಮತದಾನ ಮಾಡುವ ಅಪೂರ್ವ ಅವಕಾಶ ಕಲ್ಪಿಸಲಾಗಿತ್ತು. ಈ ಪ್ರಕ್ರಿಯೆ ಜಿಲ್ಲೆಯ ಲೋಕಸಭಾ ಕ್ಷೇತ್ರದ ಎಲ್ಲಾ ವ್ಯಾಪ್ತಿಯಲ್ಲಿ ಏಪ್ರಿಲ್ 15ರಿಂದ 17ರವರೆಗೆ ಸುಸೂತ್ರವಾಗಿ ನಡೆದಿದ್ದು ಒಟ್ಟಾರೆ ಶೇಕಡ 97.47 ಪ್ರತಿಶತ ಮತದಾನವಾಗಿದೆ.
ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ವಿಶೇಷ ಸೌಲಭ್ಯಕ್ಕೆ ಜಿಲ್ಲೆಯಲ್ಲಿ 8,010 ಮತದಾರರು ನೋಂದಣಿಯಾಗಿದ್ದರು. ಆ ಪೈಕಿ ಒಟ್ಟು 7,807 ಮಂದಿ ಅಂಚೆ ಪತ್ರದ ಮೂಲಕ ಮತ ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಒಟ್ಟು 6,053 ಮತದಾರರ ಪೈಕಿ 5,878 ಮಂದಿ ಮತ ಚಲಾಯಿಸಿದ್ದಾರೆ. ಶೇ.40% ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ ಹೊಂದಿರುವ 1,957 ಮತದಾರರಲ್ಲಿ ಒಟ್ಟು 1,929 ವಿಶೇಷಚೇತನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಉಳಿದ 203 ಮತದಾರರ ಪೈಕಿ 66 ಜನ ಈಗಾಗಲೇ ಮರಣ ಹೊಂದಿದ್ದು, 136 ಜನ ಅರ್ಹ ಮತದಾರರು ಎರಡನೇ ಭೇಟಿಯಲ್ಲಿಯೂ ಮತದಾನ ಮಾಡಿರುವುದಿಲ್ಲ. ಓರ್ವ ಮತದಾರ ಮತ ಚಲಾಯಿಸಲು ನಿರಾಕರಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.