ಮಂಗಳೂರು, ಏ 18 (DaijiworldNews/MS): ಈ ಬೇಸಿಗೆಯಲ್ಲಿ ಸುಡುತ್ತಿರುವ ಬಿಸಿಲಿನಿಂದಾಗಿ ನೀರ ಸೆಲೆಗಳೆಲ್ಲ ಬತ್ತಿ ಹೋಗುತ್ತಿದ್ದರೆ, ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಡ್ದಲಾಗಿ ನಿರ್ಮಿಸಿದ ಅಣೆಕಟ್ಟಿನಿಂದಾಗಿ ಉಪ್ಪಿನಂಗಡಿ ಪ್ರದೇಶದುದ್ದಕ್ಕೂ ಹಿನ್ನೀರು ಸಂಗ್ರಹವಾಗಿ ಜಲ ಸಮೃದ್ದವಾಗಿತ್ತು.
ಬಂಟ್ವಾಳ ತಾಲೂಕು ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬಿಳಿಯೂರು ಎಂಬಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಈ ಡ್ಯಾಂ ನಿರ್ಮಿಸಲಾಗಿತ್ತು. ಈ ಅಣೆಕಟ್ಟಿನಲ್ಲಿ ನಿನ್ನೆ ಬೆಳಗ್ಗೆಯವರೆಗೆ ನೀರಿನಿಂದ ತುಂಬಿ ತುಳುಕುತ್ತಿತ್ತು. ಆದರೇ ಇಂದು ನೀರೆ ಇಲ್ಲದೇ ನೇತ್ರಾವತಿಯ ಒಡಲು ಬರಿದಾಗಿ ಒಂದೇ ದಿನದಲ್ಲಿ ಜನತೆಯನ್ನು ನಿರಾಸೆಗೊಳಿಸಿದೆ.
ಗ್ರಾಮೀಣ ನೀರು ಸರಬರಾಜು ಯೋಜನೆ ಹಾಗೂ ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಬಿಳಿಯೂರು ಡ್ಯಾಂ ನಿಂದ ಎ ಎಂ ಆರ್ ಡ್ಯಾಂಗೆ ನೀರು ಬಿಡುಗಡೆ ಮಾಡಲು ಜಿಲ್ಲಾಡಳಿತ ಆದೇಶ ಬಂದ ಕಾರಣ ಡ್ಯಾಂ ಗೇಟ್ ತೆರೆಯಲಾಗಿತ್ತು. ಒಂದೇ ದಿನ 2.1 ಮೀಟರ್ ನಷ್ಟು ನೀರನ್ನು ಹರಿಯಬಿಡಲಾಗಿತ್ತು. ಇದರ ಪರಿಣಾಮ ಅಣೆಕಟ್ಟು ಬರಿದಾಗಿತ್ತು. ಬುಧವಾರದವರೆಗೆ ನದಿಯಲ್ಲಿ ಸಮೃದ್ದ ಜಲರಾಶಿಯನ್ನು ಕಂಡಿದ್ದ ಕೃಷಿಕ ಸಮುದಾಯ ಗುರುವಾರ ಬರಡು ನದಿಯನ್ನು ಕಂಡು ಕಳವಳಕ್ಕೆ ತುತ್ತಾದರು. ನದಿಯಲ್ಲಿ ಕೆಲ ಮೀಟರ್ ಗಳಷ್ಟು ನೀರು ಸಂಗ್ರಹಗೊಂಡಿದ್ದರಿಂದ ಕೃಷಿಕರು ತಮ್ಮ ತಮ್ಮ ತೋಟಗಳಿಗೆ ಪಂಪು ಅಳವಡಿಸಿ ಕೃಷಿ ಕಾರ್ಯಗಳಿಗೆ ನೀರುಣಿಸುತ್ತಿದ್ದರು. ಆದರೆ ನಿನ್ನೆ ಒಮ್ಮಿಂದೊಮ್ಮೆಲೆ ನೀರು ಖಾಲಿಯಾಗಿದ್ದು, ಇದು ಈ ಭಾಗದ ಕೃಷಿಕರನ್ನು ಚಿಂತೆಗೀಡು ಮಾಡಿದೆ.