ಮಂಗಳೂರು, ಏ. 18(DaijiworldNews/AA): ಲೋಕಸಭಾ ಚುನಾವಣೆ ಪ್ರಚಾರ ನಡೆಸುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದ್ದಲ್ಲದೆ, ವಾಗ್ವಾದ ನಡೆಸಿದ ಘಟನೆ ಮಂಗಳೂರು ನಗರದ ಉರ್ವಾ ಚಿಲಿಂಬಿಯ ಸಾಯಿಮಂದಿರದ ಸಮೀಪ ಗುರುವಾರ ನಡೆದಿದೆ.
ರಾಮನವಮಿ ಹಿನ್ನೆಲೆ ಸಾಯಿ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದ್ದರಿಂದ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಇದೇ ಸಂದರ್ಭ ಮಂದಿರದ ಎದುರಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತ ತೆರಳುತ್ತಿದ್ದರು. ಇದನ್ನು ಕಂಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮಂದಿರದ ಬಳಿ ಪ್ರಚಾರ ನಡೆಸದಂತೆ ಸೂಚಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು.
ಕೆಲ ಸಮಯದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು, ಪರಸ್ಪರ ಮಾತಿನ ಚಕಮಕಿ, ಹೊಯ್ ಕೈ ನಡೆಸಿದ್ದಾರೆ. ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ಹೊಯ್ ಕೈ ಆಗುತ್ತೆ ಎನ್ನುವಾಗ ಶಾಸಕ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಸ್ಥಳಕ್ಕಾಗಮಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ. ಇನ್ನು ಮಾಹಿತಿ ತಿಳಿದ ಉರ್ವಾ ಇನ್ಸ್ ಪೆಕ್ಟರ್ ಭಾರತೀ ಸ್ಥಳಕ್ಕೆ ಆಗಮಿಸಿ ಸೇರಿದ್ದ ಜನರನ್ನು ಚದುರಿಸಿದ್ದಾರೆ.