ಮಂಗಳೂರು, ಏ 18 (DaijiworldNews/MS): ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ದಿನೇ ದಿನೆ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಬಿಸಿಲಿನಿಂದ ಆವಿಯ ಪ್ರಮಾಣವೂ ಹೆಚ್ಚಾಗುತ್ತಿದೆ.
ತುಂಬೆ ವೆಂಟೆಡ್ ಡ್ಯಾಂನ ನೀರಿನ ಮಟ್ಟ ಗಣನೀಯವಾಗಿ ಕುಸಿತ ಕಂಡ ಹಿನ್ನಲೆ ಕಳೆದ ಎರಡು ದಿನಗಳ ಹಿಂದೆ ಎಎಂಆರ್ನಲ್ಲಿಸಂಗ್ರಹವಾಗಿದ್ದ ನೀರಿನಲ್ಲಿಶೇ.20 ನೀರು ತುಂಬೆ ಡ್ಯಾಂಗೆ ಬಿಡಲಾಗಿತ್ತು. ಆದರೆ ಮತ್ತೆ ನೀರಿನ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆಗಳಿಗೂ ನೀರಿನ ಲಭ್ಯವಾಗುವಂತೆ ಮಾಡಲು ಇಂದು ಬಿಳಿಯೂರು ಅಣೆಕಟ್ಟಿನಿಂದ ಎಎಂಆರ್ ಡ್ಯಾಂ ನೀರನ್ನು ಹರಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
ತುಂಬೆ ಅಣೆಕಟ್ಟಿನ ಎಲ್ಲ ಗೇಟ್ಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಕೆಳ ಭಾಗದಿಂದ ಪಂಪ್ ಮೂಲಕ ನೀರನ್ನು ಮೇಲ್ಭಾಗಕ್ಕೆ ಹರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಎಎಂಆರ್ನಿಂದ ಮೇಲ್ಭಾಗದಲ್ಲಿರುವ ಉಪ್ಪಿನಂಗಡಿ ಬಿಳಿಯೂರು ಸಮೀಪ ಡ್ಯಾಂನಲ್ಲಿ4 ಮೀಟರ್ ನೀರಿದ್ದು. ಈ ಡ್ಯಾಂಗೆ ಪಂಪ್ಹೌಸ್ ನಿರ್ಮಾಣವಾಗದ ಕಾರಣ ಇದರಲ್ಲಿ 3.5 ಮೀಟರ್ ಮಾತ್ರ ಕೆಳಮುಖವಾಗಿ ಹರಿಸಬಹುದಾಗಿದೆ. ಹೀಗಾಗಿ ಈ ಡ್ಯಾಮ್ ನ ಗೇಟ್ ತೆರೆಯಲಾಗಿದ್ದು ನೀರನ್ನು ಕೆಳಮುಖವಾಗಿ ಹರಿಸಿಲಾಗುತ್ತಿದೆ. ಇದೇ ಅವಧಿಯಲ್ಲಿ ಎಂಆರ್ ನೀರನ್ನು ತುಂಬೆಯತ್ತ ಹರಿಸಿದರೆ ತುಂಬೆ ಡ್ಯಾಂ ಮತ್ತೆ ಭರ್ತಿಯಾಗುವ ಸಾಧ್ಯತೆ ಇದೆ.
ಮಂಗಳೂರು ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನ ಸುತ್ತಮುತ್ತ ಕೃಷಿಗೆ ನೀರು ಉಪಯೋಗಿಸುವುದನ್ನು ಸಂಪೂರ್ಣವಾಗಿ ತಡೆಹಿಡಿಯಲು ದ.ಕ. ಜಿಲ್ಲಾಧಿಕಾರಿ ಈಗಾಗಲೇ ಆದೇಶಿಸಿದ್ದಾರೆ.
"ಕೈಗಾರಿಕೆಗಳಿಗೂ ನೀರಿನ ಮಟ್ಟವನ್ನು ಅನುಸರಿಸಿ ನೀರು ಪೂರೈಕೆಯಲ್ಲಿ ಕಡಿತ ಮಾಡುವಂತೆ ಸೂಚಿಸಲಾಗಿದೆ. ಸದ್ಯ ತುಂಬೆ ಅಣೆಕಟ್ಟು, ಎಎಂಆರ್ ಹಾಗೂ ಬಿಳಿಯೂರು ಅಣೆಕಟ್ಟಿನಲ್ಲಿ ನೀರು ಸಂಗ್ರಹ ಇರುವುದರಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ರೇಶನಿಂಗ್ ಮಾಡಲಾಗುತ್ತಿಲ್ಲ" ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಎಲ್ಲಾ ನಾಗರಿಕರು ನೀರಿನ ಮಿತಬಳಕೆ ಮಾಡಬೇಕು. ಕೈಗಾರಿಕೆಗಳು ಮತ್ತು ರೈತರು ಮಾನ್ಸೂನ್ ಮಳೆ ಆಗಮನದವರೆಗೆ ನಾಗರಿಕರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.