ಶಬರಿಮಲೆ, ನ 20: ಕೇರಳದಲ್ಲಿರುವ ಪುಣ್ಯ ಕ್ಷೇತ್ರ ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯೊಬ್ಬರು ಪ್ರವೇಶ ಮಾಡುವ ಪ್ರಯತ್ನ ಮಾಡಿದ್ದು, ಪೊಲೀಸರು ಅದನ್ನು ವಿಫಲಗೊಳಿಸಿದ್ದಾರೆ.
31 ವರ್ಷದ ಪಾರ್ವತಿ ಹೆಸರಿನ ಮಹಿಳೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುವ ಯತ್ನವನ್ನು ಮಾಡಿದ್ದರು. ಆದರೆ ಅದನ್ನು ತಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಸನ್ನಿಧಾನದಲ್ಲಿ ನಿರ್ಬಂಧವಿದೆ. ಆದರೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ 31 ವರ್ಷದ ಪಾರ್ವತಿ ಹೆಸರಿನ ಮಹಿಳೆಯೊಬ್ಬರು ದೇವಾಲಯ ಪ್ರವೇಶ ಮಾಡಲು ಸನ್ನಿಧಾನಂವರೆಗೂ ಬಂದಿದ್ದರು.
ಭಕ್ತರು ಇರುಮುಡಿ ಹೊತ್ತು ಹದಿನೆಂಟು ಮೆಟ್ಟಿಲು ಹತ್ತಿ ಸನ್ನಿಧಾನಕ್ಕೆ ಬರುವುದು ಇಲ್ಲಿನ ಕ್ರಮ. ಆದರೆ ಆಂಧ್ರ ಮೂಲದ ಈ ಮಹಿಳೆ ಬೇರೆ ದಾರಿಯಲ್ಲಿ ಸನ್ನಿಧಾನಕ್ಕೆ ಬಂದಿದ್ದರು. ಎಚ್ಚೆತ್ತುಕೊಂಡ ಪೊಲೀಸರು ಕೂಡಲೇ ಅವರನ್ನು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.
ಮಂಡಲಂ-ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆ ದೇವಸ್ಥಾನವನ್ನು ನವಂಬರ್ 15ರಿಂದ ತೆರೆಯಲಾಗಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರದತ್ತ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ ಶಬರಿಮಲೆಗೆ ಬರುವ ಮಹಿಳೆಯರನ್ನು ಪಂಪಾ ನದಿ ತೀರದಿಂದಲೇ ಗಮನಿಸಲಾಗುತ್ತದೆ. ಆದರೆ ಪೊಲೀಸರ ಕಣ್ಣು ತಪ್ಪಿಸಿ ಈ ಮಹಿಳೆ ದೇವಾಲಯದ ಆವರಣಕ್ಕೆ ಬಂದಿದ್ದು ಎಲ್ಲರಿಗೂ ಶಾಕ್ ನೀಡಿದೆ.