ಕೊಣಾಜೆ, ಏ.16(DaijiworldNews/AK): ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ದಂತ ವೈದ್ಯೆ ಸ್ವಾತಿ ಶೆಟ್ಟಿ (24) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು.
ನಗರದ ಎ.ಜೆ. ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಮಂಗಳವಾರದಿಂದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ವೃತ್ತಿಗೆ ದಾಖಲಾಗಬೇಕಿರುವುದರಿಂದ ಭಾನುವಾರ ತನಕ ಆಳ್ವರಬೆಟ್ಟು ಮನೆಯಲ್ಲಿ ತಂಗಿದ್ದು ಸೋಮವಾರ ಸಂಜೆ ಮನೆಯಿಂದ ತೆರಳಿದ್ದರು. ದಂತವೈದ್ಯೆಯಾಗಿ ವೃತ್ತಿ ಆರಂಭಿಸುವ ಸಲುವಾಗಿ ಪಾಂಡೇಶ್ವರದ ಪಿಜಿಯೊಂದರಲ್ಲಿ ಸೋಮವಾರ ಸಂಜೆಯಿಂದ ಉಳಿದುಕೊಂಡಿದ್ದು ರಾತ್ರಿ ತಾಯಿ ತಂದೆ ಜತೆಗೆ ಮೊಬೈಲ್ ನಲ್ಲಿ ಮಾತನಾಡಿದ್ದರು. ವಿಪರೀತ ತಲೆನೋವು ಎಂಬ ಕಾರಣದಿಂದ ತಾಯಿಯ ಜತೆಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದರು.
ಪಕ್ಕದ ಸಹಪಾಠಿ ತಲೆನೋವು ಇರೋದ್ರಿಂದ ತೊಂದರೆ ಕೊಡೋದು ಬೇಡ ಎಂದು ಎಚ್ಚರಿಸಲಿಲ್ಲ. ಬೆಳಗ್ಗೆ ದೇಹ ತಣ್ಣಗಾಗಿದ್ದನ್ನು ಕಂಡು ಸೂಪರ್ ವೈಸರ್ ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್ ಲಾಕ್ ಗೆ ದಾಖಲಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಅವಿವಾಹಿತೆಯಾಗಿರುವ ಸ್ವಾತಿ ಶೆಟ್ಟಿ ಅವರಿಗೆ ಪೋಷಕರು ಈ ವರ್ಷಾಂತ್ಯದೊಳಗೆ ಮದುವೆ ಮಾಡುವ ತಯಾರಿ ನಡೆಸಿದ್ದರು. ಅಪರೂಪಕ್ಕೊಮ್ಮೆ ತಲೆನೋವು ಬಿಟ್ರೆ ಬೇರೆ ಯಾವುದೇ ತೊಂದರೆ ಇರಲಿಲ್ಲ. ಉತ್ತಮ ಹೆಸರು ಸಂಪಾದಿಸಿದ್ದ ಸ್ವಾತಿ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
ಸಂಘದ ಪ್ರಮುಖ ಮುಖಂಡರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್, ಸಂತೋಷ್ ಕುಮಾರ್ ರೈ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಗದೀಶ್ ಆಳ್ವ ಕುವ್ವೆತ್ತಬೈಲ್, ಪ್ರಶಾಂತ್ ಕಾಜವ, ನವಾಜ್ ನರಿಂಗಾನ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.