ಬಂಟ್ವಾಳ,(DaijiworldNews/AZM): ಕಾಡುಕೋಣ ತಿವಿದು ಬಾಲಕಿ ಸಹಿತ ಇಬ್ಬರಿಗೆ ಗಾಯಗಳಾದ ಘಟನೆ ಬಂಟ್ವಾಳದ ಕಾಡಬೆಟ್ಟು ಪೂರ್ಲೊಟ್ಟು ಎಂಬಲ್ಲಿ ಇಂದು ನಡೆದಿದೆ. ಘಟನೆಗೆ ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಗಾಯಗೊಂಡವರನ್ನು ಬಾಲಕಿ ಹರ್ಷಾ, ಬಾಲಕಿಯ ಚಿಕ್ಕಮ್ಮ ಅಂಗನವಾಡಿ ಶಿಕ್ಷಕಿ ಕುಮಾರಿ ಚಂದ್ರಾವತಿ ಎಂದು ಗುರುತಿಸಲಾಗಿದೆ.
ಬಂಟ್ವಾಳದ ಕಾಡಬೆಟ್ಟು ಪೂರ್ಲೊಟ್ಟು ಎಂಬಲ್ಲಿ ಗೊಬ್ಬರ ಗುಂಡಿಗೆ ಬಿದ್ದು ಮೇಲೆ ಬರಲು ಸಾಧ್ಯವಾಗದೆ ಗುಂಡಿಯೊಳಗೆ ಸುತ್ತಾಡುತ್ತಿದ್ದ ಕಾಡುಕೋಣವೊಂದನ್ನು ಬಂಟ್ವಾಳ ಅರಣ್ಯ ಇಲಾಖೆ ಹಾಗೂ ಊರವರ ಸಹಕಾರದಿಂದ ಮೇಲಕ್ಕೆತ್ತಿ ಸುರಕ್ಷಿತವಾಗಿ ಕಾಡಿಗೆ ವಾಪಾಸು ಕಳುಹಿಸಿದ್ದಾರೆ. ಆದರೆ ಕಾಡಿನಿಂದ ವಾಪಾಸು ಬಂದ ಕಾಡುಕೋಣ ಬಾಲಕಿ ಹಾಗೂ ಮಹಿಳೆಗೆ ಗುದ್ದಿ ಗಾಯಗೊಳಿಸಿದೆ. ಇಲ್ಲಿನ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಹಳೆಯ ಗೊಬ್ಬರ ಗ್ಯಾಸ್ ನ ಗುಂಡಿಗೆ ಮುಂಜಾನೆ ಕಾಡು ಕೋಣ ಬಿದ್ದಿತ್ತು. ಗುಂಡಿಯೊಳಗೆ ಬಿದ್ದಿರುವ ಕಾಡು ಕೋಣಕ್ಕೆ ಮತ್ತೆ ಮೇಲೆ ಬರಲು ಸಾಧ್ಯವಾಗದೆ ಸಿಕ್ಕಿಹಾಕಿಕೊಂಡಿತ್ತು.
ಬೆಳಿಗ್ಗೆ ವೇಳೆ ಮನೆಯವರು ಗೊಬ್ಬರ ಗ್ಯಾಸ್ ಗೆ ಗೊಬ್ಬರ ಹಾಕಲು ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಅವರು ಬಂಟ್ವಾಳ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಬಂಟ್ವಾಳ ಉಪವಲಯ ಸಂರಕ್ಷಣಾಧಿಕಾರಿ ಸುರೇಶ್ ಸ್ಥಳಕ್ಕೆ ಬೇಟಿ ನೀಡಿ ಕಾಡು ಕೋಣವನ್ನು ಮೇಲಕ್ಕೆತ್ತಿ ಕಾಡಿಗೆ ಕಳುಹಿಸಿದ್ದಾರೆ.
ಬಾಲಕಿ ಹರ್ಷಾ ಹಾಗೂ ಬಾಲಕಿಯ ಚಿಕ್ಕಮ್ಮ ಅಂಗನವಾಡಿ ಶಿಕ್ಷಕಿ ಕುಮಾರಿ ಚಂದ್ರಾವತಿ ಇಂದು ಬೆಳಿಗ್ಗೆ ಬಂಟ್ವಾಳ ಮಹಾಲಿಂಗೇಶ್ಬರ ದೇವಲಾಯಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಾಸು ಮನೆಯ ಕಡೆಗೆ ತೆರಳುವಾಗ ಕಾಡುಕೋಣ ಎರಗಿ ಗಾಯಗೊಳಿಸಿದೆ. ಕಾಡುಕೋಣನ ರೌದ್ರಾವತಾರಕ್ಕೆ ಬಾಲಕಿಯ ಕೈ ಮುರಿದಿದ್ದು, ಮಹಿಳೆಯ ಮೈಮೇಲೆ ಗಾಯಗಳಾಗಿದೆ.
ಗಾಯಗೊಂಡ ಬಾಲಕಿ ಹರ್ಷಾ ಹಾಗೂ ಬಾಲಕಿಯ ಚಿಕ್ಕಮ್ಮ ಅಂಗನವಾಡಿ ಶಿಕ್ಷಕಿ ಕುಮಾರಿ ಚಂದ್ರಾವತಿ ಇವರಿಬ್ಬರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆ ಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ
.