ಬೆಳ್ತಂಗಡಿ,ಮೇ4(DaijiworldNews/AZM):ಸಂಚರಿಸುತ್ತಿರುವ ಕಾರಿನ ಮೇಲೆ ಮರ ಬಿದ್ದು, ಇಬ್ಬರು ಯುವಕರು ಧಾರುಣವಾಗಿ ಮೃತಪಟ್ಟಿರುವ ಘಟನೆ ಉಜಿರೆಯ ಸಿದ್ಧವನ ಗುರುಕುಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.
ಮೃತ ವಿಗ್ನೇಶ್
ಮೃತ ಕ್ಷಿತಿಜ್ ಜೈನ್
ಮೃತ ಯುವಕರನ್ನು ನಿನ್ನಿಕಲ್ಲು ನಿವಾಸಿ ವಿಗ್ನೇಶ್(21) ಹಾಗೂ ಮಡಂತ್ಯಾರು ನಿವಾಸಿ ಕ್ಷಿತಿಜ್ ಜೈನ್(24) ಎಂದು ಗುರುತಿಸಲಾಗಿದೆ.
ಯಾವುದೇ ಗಾಳಿ, ಮಳೆ ಇಲ್ಲದೆ ಇದ್ದು ಹಠಾತ್ತಾಗಿ ನಡೆದ ಘಟನೆಯಿಂದ ನಾಗರಿಕರು ದಿಗ್ಭ್ರಾಂತರಾಗಿದ್ದಾರೆ. ಧರ್ಮಸ್ಥಳದಿಂದ ಉಜಿರೆ ಕಡೆಗೆ ಕಾರಿನಲ್ಲಿ ನಾಲ್ವರು ಪಯಣಿಸುತ್ತಿದ್ದರು. ಕಾರು ಸಿದ್ಧವನ ಎಂಬಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಮೇ ಫ್ಲವರ್ನ ಬೃಹತ್ ಮರವೊಂದು ಬುಡ ಸಮೇತ ಕುಸಿದು ಕಾರಿನ ಮೇಲೆ ಉರುಳಿದೆ.ಕಾರಿನ ಹಿಂಬದಿ ಕುಳಿತಿದ್ದ ಉಜಿರೆ ನಿನ್ನಿಕಲ್ಲು ನಿವಾಸಿ ಮೂಲತ ಪುದುವೆಟ್ಟು ಎಂಬಲ್ಲಿನ ವಿಘ್ನೇಶ್ (21) ಸ್ಥಳದಲ್ಲೇ ಮೃತಪಟ್ಟರೆ , ಮಡಂತ್ಯಾರು ನಿವಾಸಿ ಕ್ಷಿತಿಜ್ಜೈನ್ (24) ಎಂಬುವರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಂಬ್ಯುಲೆನ್ಸ್ನಲ್ಲೇ ಕೊನೆಯುಸಿರೆಳೆದಿದ್ದಾರೆ.
ಸುಶಾಂತ ಹಾಗು ಹರ್ಷಿತ್ ಎಂಬ ಇನ್ನಿಬ್ಬರು ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅಲ್ಲಿ ಏರ್ಬ್ಯಾಗ್ ತೆರೆದುಕೊಂಡಿದ್ದರೂ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರೂ ಮಿತ್ರರಾಗಿದ್ದು ಧರ್ಮಸ್ಥಳದಿಂದ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಂಪು ಬಣ್ಣದಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ನಾಗರಿಕರು ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರಯತ್ನಪಟ್ಟಿದ್ದಾರೆ.
ಅಧಿಕ ವಾಹನ ಸಂಚಾರವಿರುವ ರಸ್ತೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಒಂದು ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸಾರ್ವಜನಿಕರ ನೆರವಿನಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಲಾಯಿತು.