ಮಂಗಳೂರು/ಉಡುಪಿ,ಮೇ04(Daijiworld News/SS): ಕರಾವಳಿಯಲ್ಲಿ ಲಕ್ಷಕ್ಕಿಂತಲೂ ಅಧಿಕ ಮಂದಿ ಬೀಡಿ ಕಾರ್ಮಿಕರಿದ್ದು, ಈ ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರ ಭವಿಷ್ಯ ನಿಧಿಯ ದಾಖಲೆಗಳಲ್ಲಿ ಗೊಂದಲ ಸೃಷ್ಟಿಯಾಗಿರುವ ಆರೋಪಗಳು ಮತ್ತೆ ಕೇಳಿ ಬರುತ್ತಿದೆ.
ಬೀಡಿ ಕಾರ್ಮಿಕರು ಬದುಕಿಗಾಗಿ ಅನೇಕ ಕಷ್ಟ-ಕಾರ್ಪಣ್ಯಗಳನ್ನುಅನುಭವಿಸುತ್ತಿದ್ದು, ಭವಿಷ್ಯನಿಧಿ ಹಣ ಪಡೆಯಲು ಹರಸಾಹಸ ಪಡಬೇಕಾಗಿದೆ. ಅನಕ್ಷರಸ್ಥರು, ಕಡಿಮೆ ವಿದ್ಯೆಯುಳ್ಳ ಬೀಡಿ ಕಾರ್ಮಿಕರ ದಾಖಲೆಗಳಲ್ಲಿ ವ್ಯತ್ಯಾಸಗಳಿದ್ದು, ಭವಿಷ್ಯ ನಿಧಿ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.
ಬಹಳ ಹಿಂದಿನ ದಿನಗಳಲ್ಲಿ ಬೀಡಿ ಕಾರ್ಮಿಕರು ಜನ್ಮ ದಿನಾಂಕವನ್ನು ಅಂದಾಜಿಗೆ ಬರೆದು ಬೀಡಿ (ಪಾಸ್ ಬುಕ್) ದಾಖಲೆಗೆ ಸೇರಿಸುತ್ತಿದ್ದರು. ಕರಾವಳಿಯಲ್ಲಿರುವ ಹೆಚ್ಚಿನ ಬೀಡಿ ಕಾರ್ಮಿಕರಲ್ಲಿ ಸರಿಯಾದ ಹುಟ್ಟಿದ ದಿನಾಂಕದ ದಾಖಲೆಗಳು ಇಲ್ಲ. ಕೆಲವು ಕಾರ್ಮಿಕರು ಬೀಡಿಯ ಪಾಸ್ಪುಸ್ತಕದ ದಾಖಲೆಗಳಲ್ಲಿ ಹೆಸರು ನೋಂದಾಯಿಸಿದ್ದರೂ ಕೂಡ ಆಧಾರ್ ಕಾರ್ಡ್, ಐಡಿ ಕಾರ್ಡ್, ರೇಶನ್ ಕಾರ್ಡ್ ಇತ್ಯಾದಿಗಳಲ್ಲಿ ಹೆಸರು, ಹುಟ್ಟಿದ ದಿನಾಂಕ ಮತ್ತಿತರ ಮಾಹಿತಿಯನ್ನು ವಿದ್ಯೆಯ ಕೊರತೆಯಿಂದ ದಾಖಲೆಗಳಲ್ಲಿ ಸೇರಿಸಿರುವುದಿಲ್ಲ,
ಪರಿಣಾಮ, ಇದು ಈಗ ಗೊಂದಲಕ್ಕೆ ಕಾರಣವಾಗಿದೆ. ಪ್ರಸ್ತುತ ಭವಿಷ್ಯ ನಿಧಿ ಇಲಾಖೆಯಿಂದ ದಿನಕ್ಕೊಂದು ಕಾನೂನು ಬಂದಿರುವುದರಿಂದ ಬೀಡಿ ಉದ್ಯಮದಲ್ಲಿ ದುಡಿಯುವ ಬೀಡಿ ಕಾರ್ಮಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಬೀಡಿ ಕಾರ್ಮಿಕರ ಭವಿಷ್ಯನಿಧಿ ಜೋಡಣೆಗೆ ಆಧಾರ್, ಗಜೆಟೆಡ್ ಅಧಿಕಾರಿಗಳಿಂದ ಪ್ರಮಾಣಪತ್ರ ಮತ್ತು ಪಾನ್ಕಾರ್ಡ್ ಅಥವಾ ಜಂಟಿ ಡಿಕ್ಲರೇಶನ್ ಮಾಡಿಸಿ ತರುವಂತೆ ಭವಿಷ್ಯ ನಿಧಿ ಇಲಾಖೆಯಿಂದ ಸೂಚಿಸಲಾಗಿತ್ತು. ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಬೀಡಿ ಕಾರ್ಮಿಕರು ನೆಮ್ಮದಿ ಕೇಂದ್ರಕ್ಕೆ ತೆರಳಿದರೆ ಅಲ್ಲಿ ತಾಂತ್ರಿಕ ದೋಷ ಅಥವಾ ಸರಿಯಾಗಿ ಸ್ಪಂದನೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.
ವಿಪರ್ಯಾಸವೆಂದರೆ, ಬೀಡಿ ಕಾರ್ಮಿಕರು ವಿನಾಕಾರಣ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಭವಿಷ್ಯನಿಧಿ ಸಂಘಟನೆಯ ಕೇಂದ್ರ ಕಛೇರಿಯ ನಿರ್ದೇಶನದಂತೆ ನಿಯಮಗಳಲ್ಲಿ ದಿನಕ್ಕೊಂದು ರೀತಿಯ ಬದಲಾವಣೆಗಳು ಆಗುತ್ತಿದ್ದು ಕಾರ್ಮಿಕರ ನೈಜ ಪರಿಸ್ಥಿತಿ ಇಲಾಖೆಯ ಗಮನಕ್ಕೆ ಬಂದಿರದಿರುವುದು ದುರಂತ.
ಭವಿಷ್ಯ ನಿಧಿಯಲ್ಲಿ ನೋಂದಣಿ ಆಗಿರುವ ಬೀಡಿ ಕಾರ್ಮಿಕರು ತಮ್ಮ ಮಕ್ಕಳ ಮದುವೆ, ಮನೆ ನಿರ್ಮಿಸಲು, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ ಬಂದಾಗ ತಮ್ಮ ಭವಿಷ್ಯ ನಿಧಿಯಲ್ಲಿರುವ ಹಣ ಪಡೆದುಕೊಳ್ಳಲು ಅರ್ಜಿ ಹಾಕುತ್ತಾರೆ. ಆದರೆ ಅರ್ಜಿ ಹಾಕಿದ ಹೆಚ್ಚಿನ ಕಾರ್ಮಿಕರು ದಾಖಲೆಯ ಗೊಂದಲದಿಂದ ಹಣ ಬರದೆ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.