ಮಂಗಳೂರು,ಮೇ 04 (Daijiworld News/MSP): ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಸ್ ಅನ್ನು ಭಾರತೀಯ ಜನತಾ ಪಾರ್ಟಿಯೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದಾಗಿ ಹೇಳಿಕೊಂಡಿದೆ. ಒಟ್ಟಾರೆ ಸರ್ಜಿಕಲ್ ಸ್ಟ್ರೈಕ್ಸ್ ರಾಜಕೀಯ ಚರ್ಚೆಯ, ವಾಗ್ದಾಳಿಯ ವಸ್ತುವಾಗಿದ್ದು, ಕಾಂಗ್ರೆಸ್ ಬಿಜೆಪಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದೆ.
ಈ ನಡುವೆ ಶಾಸಕ ವೇದವ್ಯಾಸ್ ಕಾಮತ್, ಕಾಂಗ್ರೆಸ್ ಕುರಿತು ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಜನರಿಗೆ ಗೊತ್ತಿಲ್ಲದ ಹಾಗೆ ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್ ದಾಳಿ ನಡೆದಿದೆ? ಇದು ಕಾಂಗ್ರೆಸ್ ನಾಯಕರಿಗೆ ತಿಳಿದಿಲ್ಲ ಎಂದು ಕಾಣುತ್ತದೆ. ಹೀಗಾಗಿ ಒಬ್ಬೊಬ್ಬ ಕಾಂಗ್ರೆಸ್ ಮುಖಂಡ ಒಂದೊಂದು ಸಂಖ್ಯೆ ಹೇಳುತ್ತಿದ್ದು, ಇದರಲ್ಲಿ ಯಾವುದು ನಿಜ? ಸ್ವತಃ ಪಾಕಿಸ್ತಾನದವರಿಗೇ ದಾಳಿ ಬಳಿಕವೂ ಗೊತ್ತಾಗದ ಹಾಗೆ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿತೇ ಕಾಂಗ್ರೆಸ್? ಎಂದು ವ್ಯಂಗ್ಯಭರಿತವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯುಪಿಎ ಸರ್ಕಾರದ ಅವಧಿಯಲ್ಲಿ ಪಾಕ್ ಮೇಲೆ ೩ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿಕೆ ನೀಡಿದರೆ, ಮಲ್ಲಿಕಾರ್ಜುನ ಖರ್ಜೆ 6 ಬಾರಿ ಎನ್ನುತ್ತಾರೆ. ಇನ್ನು ಮುಂದುವರಿದು ಹೋದರೆ ಮಾಜಿ ಸಿಎಂ ಸಿದ್ದರಾಮಯ್ಯ ೧೦- ೧೨ ಬಾರಿ ಎನ್ನುತ್ತಾರೆ ಇದರಲ್ಲಿ ಯಾವುದು ನಿಜ? ಆದರೆ ಪ್ರಧಾನಿ ಮೋದಿ ನೇತೃತ್ವದ ಅವಧಿಯಲ್ಲಿ ಪಾಕ್ ಮೇಲೆ ನಡೆದ ೨ ದಾಳಿಯ ಬಗ್ಗೆ ದೇಶವಾಸಿಗಳಿಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.