ಬಂಟ್ವಾಳ, ಮೇ 04 (Daijiworld News/MSP): ಕಾಡುಕೋಣವೊಂದು ಗೋಬರ್ ಗ್ಯಾಸ್ ನ ಗುಂಡಿಯೊಳಗೆ ಬಿದ್ದ ಘಟನೆ ಕಾಡಬೆಟ್ಟು ಗ್ರಾಮದ ಕಾಡಬೆಟ್ಟು ಪೂರ್ಲೊಟ್ಟು ಎಂಬಲ್ಲಿ ನಡೆದಿದೆ. ನಿವಾಸಿ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಗೊಬ್ಬರ ಗ್ಯಾಸ್ ನ ಗುಂಡಿಗೆ ಬಿದ್ದಿದೆ.
ಗೊಬ್ಬರ ಗ್ಯಾಸ್ ನ ಗುಂಡಿಯೊಳಗೆ ಬಿದ್ದಿರುವ ಕಾಡು ಕೋಣಕ್ಕೆ ಮತ್ತೆ ಮೇಲೆ ಬರಲು ಸಾಧ್ಯವಾಗದೆ ಸಿಕ್ಕಿಹಾಕಿಗೊಂಡಿದೆ. ಬೆಳಿಗ್ಗೆ ವೇಳೆ ಮನೆಯವರು ಗೊಬ್ಬರ ಗ್ಯಾಸ್ ಗೆ ಗೊಬ್ಬರ ಹಾಕಲು ಬಂದ ವೇಳೆ ಈ ಘಟನೆ ಬೆಳಕಿಗೆ ಬಂದ ಬಳಿಕ ಅವರು ಬಂಟ್ವಾಳ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಬಳಿಕ ಬಂಟ್ವಾಳ ಉಪವಲಯ ಸಂರಕ್ಷಣಾ ಧಿಕಾರಿ ಸುರೇಶ್ ಸ್ಥಳ ಕ್ಕೆ ಬೇಟಿ ನೀಡಿ ಕಾಡು ಕೋಣವನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಲಾಗುತ್ತಿದೆ.
ಜನರನ್ನು ನೋಡಿದಾಗ ದುರುಗಟ್ಟಿ ನಿಲ್ಲುವ ಕಾಡುಕೋಣವನ್ನು ಮೇಲಕ್ಕೆ ಎತ್ತಲು ಜೆಸಿಬಿ ತರಲಾಗಿದೆ. ಗುಂಡಿಯ ಸುತ್ತಲೂ ಮಣ್ಣು ತೆಗೆದ ಬಳಿಕ ಜಾಗರೂಕತೆಯಿಂದ ಕಾಡು ಕೋಣವನ್ನು ಮೇಲೆ ತರಬೇಕಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ. ಕಾಡು ಕೋಣವನ್ನು ನೋಡಲು ಊರಿನ ಜನ ತಂಡತಂಡೋಪವಾಗಿ ಬರುತ್ತಾ ಇದ್ದಾರೆ.
ರಾತ್ರಿ ಹೊತ್ತಿನಲ್ಲಿ ಕಾಡಿನಿಂದ ಬಂದಿರುವ ಈ ಕಾಡುಕೋಣ ಯಾವುದೋ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗುವ ವೇಳೆ ಗೊಬ್ಬರ ಗ್ಯಾಸ್ ಗುಂಡಿ ಕಾಣದೆ ಬಿದ್ದಿರಬೇಕು ಎಂದು ಹೇಳಲಾಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ವಿನಯ್, ಬಾಸ್ಕರ್, ಸ್ಮಿತಾ, ಅನಿತಾ ಅನಿಲ್ ಹಾಗೂ ಪರಿಸರ ಸ್ನೇಹಿ ಕಿರಣ್ ಪಿಂಟೋ ಮತ್ತು ಗ್ರಾಮಸ್ಥರ ಸ್ಥಳದಲ್ಲಿದ್ದು ಕಾಡು ಕೋಣದ ರಕ್ಷಣೆಯಲ್ಲಿ ತೊಡಗಿದ್ದಾರೆ.