ಬೆಳ್ತಂಗಡಿ, ಮೇ04(Daijiworld News/SS): ಹೆಸರು ಬದಲಾವಣೆಗಾಗಿ ಇಲ್ಲಿನ ತಾಲೂಕು ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವ್ಯಕ್ತಿಗಳು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ನಡೆದಿದೆ.
ಕಡಿರುದ್ಯಾವರ - ಮಿತ್ತಬಾಗಿಲು ಗ್ರಾಮ ಕರಣಿಕ ವಿ.ಎ. ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಕೊಂಬಿನಡ್ಕ ಎಸಿಬಿ ಬಲೆಗೆ ಬಿದ್ದವರು.
ಆರ್.ಟಿ.ಸಿ. ಹೆಸರು ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ. ಮಿತ್ತಬಾಗಿಲಿನ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಗೌಡ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಈ ಕಾರ್ಯಾಚರಣೆ ನಡೆಸಿದೆ.
ವಿ.ಎ ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಆರ್.ಟಿ.ಸಿ. ಹೆಸರು ಬದಲಾವಣೆಗೆ 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಮಾತ್ರವಲ್ಲ, ಪ್ರದೀಪ್ ಎಂಬ ವ್ಯಕ್ತಿಯಿಂದ ರಮೇಶ್ ನಾಯ್ಕ್ 5 ಸಾವಿರ ರೂ. ಪಡೆದಿದ್ದರು ಎನ್ನಲಾಗಿದೆ.
ಎಸಿಬಿ ಸೂಚನೆಯಂತೆ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆಯೇ ಈ ದಾಳಿ ಮಾಡಲಾಗಿದೆ. ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.