ಮಂಗಳೂರು, ಮೇ04(Daijiworld News/SS): ಇತಿಹಾಸ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾ ದಂಡರುದ್ರಾಭಿಷೇಕ ವೈದಿಕ ವಿಧಿ ವಿಧಾನಗಳು ಆರಂಭಗೊಂಡಿದೆ.
ಕ್ಷೇತ್ರದ ಪ್ರಧಾನ ದೇವರಾದ ಶ್ರೀ ಸ್ವಾಮಿ ಮಂಜುನಾಥ ಹಾಗೂ ಪರಿವಾರ ದೇವರಿಗೆ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡರುದ್ರಾಭಿಷೇಕದ ವೈದಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಈಗಾಗಲೇ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾ ದಂಡರುದ್ರಾಭಿಷೇಕ ಹಿನ್ನೆಲೆಯಲ್ಲಿ, ನಗರದ ನೆಹರೂ ಮೈದಾನದಿಂದ ಮೆರವಣಿಗೆ ಮೂಲಕ ಹೊರೆಕಾಣಿಕೆಯನ್ನು ಶ್ರೀ ಕ್ಷೇತ್ರಕ್ಕೆ ತರಲಾಗಿದೆ.
ಹೊರೆಕಾಣಿಕೆ ಮೆರವಣಿಗೆಗೆ ದೇರೆಬೈಲ್ ವಿಠಲದಾಸ ತಂತ್ರಿ ಚಾಲನೆ ನೀಡಿದ್ದು, ಸುಮಾರು 100ಕ್ಕೂ ಅಧಿಕ ವಾಹನಗಳು ಹಸಿರು ಹೊರೆಕಾಣಿಕೆಯನ್ನು ಹೊತ್ತು ನೆಹರೂ ಮೈದಾನದಿಂದ ಹೊರಟು, ಕ್ಲಾಕ್ ಟವರ್-ಹಂಪನಕಟ್ಟೆ-ಕೆ.ಎಸ್.ರಾವ್ ರಸ್ತೆ-ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ ವೃತ್ತ), ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಸಾಗಿ ಶ್ರೀ ಕ್ಷೇತ್ರ ಕದ್ರಿಗೆ ಸಾಗಿ ಬಂದಿದೆ.
ಬ್ರಹ್ಮಕಶಾಭಿಷೇಕದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಹೊರಭಾಗದಲ್ಲಿ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ಗೆ ಕದ್ರಿ ಕ್ರೀಡಾಂಗಣ ಹಾಗೂ ಇತರ ಮೂರು ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದೇವಾಲಯವನ್ನು ವಿದ್ಯುದ್ದೀಪಾಲಂಕಾರದಿಂದ ಅಲಂಕರಿಸಲಾಗಿದೆ.