ಕೋಟ, ಮೇ 04 (Daijiworld News/MSP): ಕೋಟದಲ್ಲಿ ನಡೆದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ಹಲವು ಲೋಪದೋಷಗಳಿದ್ದು, ತಿದ್ದು ಪಡಿ ಮಾಡುವಂತೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಹೀಗಾಗಿ ಪ್ರಕರಣದ ತನಿಖಾಧಿಕಾರಿ ಮೇಲೆ ನಮಗೆ ನಂಬಿಕೆ ಇಲ್ಲ. ಆದ್ದರಿಂದ ಅವರನ್ನು ಬದಲಾಯಿಸಬೇಕು ಎಂದು ಕೊಲೆಯಾದ ಯುವಕರ ಮನೆಯವರು ಎಸ್ಪಿ ನಿಶಾ ಜೇಮ್ಸ್ ಅವರಿಗೆ ಮೇ 3ರಂದು ಮನವಿ ಸಲ್ಲಿಸಿದರು.
ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ತನಿಖಾಧಿಕಾರಿಗಳನ್ನು ತತ್ಕ್ಷಣ ಬದಲಿಸಬೇಕು ಮತ್ತು ಕಾಲಂ 173/8ರಡಿ ಹೆಚ್ಚಿನ ತನಿಖೆ ನಡೆಸಬೇಕು. ಇಲ್ಲವಾದರೆ ಹೋರಾಟ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದರು.
ನಿಷ್ಪಕ್ಷಪಾತ ತನಿಖೆ: ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಿಷ್ಪಕ್ಷಪಾತ ತನಿಖೆ ನಡೆದು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ತನಿಖಾಧಿಕಾರಿಗಳು ಇದುವರೆಗೆ ಯಾವುದೇ ಲೋಪದೋಷ ಮಾಡಿಲ್ಲ. ನಾನೇ ಪ್ರಕರಣದ ಬಗ್ಗೆ ಮುತುವರ್ಜಿ ವಹಿಸಿಕೊಂಡು ಪ್ರಕರಣದ ದಾಖಲೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇನೆ. ದೋಷಾರೋಪಣ ಪಟ್ಟಿ ಕುರಿತು ಅನುಮಾನಗಳಿದ್ದರೆ ಹೆಚ್ಚುವರಿ ವಿವರಗಳನ್ನು ಸಲ್ಲಿಸಲು ಅವಕಾಶವಿದೆ. ಲೋಪದೋಷ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ .ಎಂದು ಎಸ್ಪಿ ನಿಶಾ ಜೇಮ್ಸ್ ಪ್ರತಿಕ್ರಿಯಿಸಿದ್ದಾರೆ.