ಪಡುಬಿದ್ರಿ, ಮೇ04(Daijiworld News/SS): ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವಿರುದ್ಧ ಉಚ್ಚಿಲದ ಭಾಸ್ಕರ ನಗರ ನಿವಾಸಿ ಆಸೀಫ್ ಹನೀಫ್ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೇಸ್ಬುಕ್ನಲ್ಲಿ ಇಸ್ಲಾಂ ಬಗೆಗೆ ಅಪಹಾಸ್ಯ, ಮುಸಲ್ಮಾನರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿರುವುದು ಹಾಗೂ ಮಾಲೇಗಾಂವ್ ಸ್ಫೋಟವನ್ನು ಸಮರ್ಥಿಸಿ ಮುಸ್ಲಿಮರು ಭಯೋತ್ಪಾದರೆಂದು ಹೇಳಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವಿರುದ್ಧ ದೂರು ದಾಖಲಾಗಿದೆ.
ಶ್ರೀಲಂಕಾ ಮಾದರಿಯಲ್ಲಿ ಮಂಗಳೂರಿನಲ್ಲೂ ಮತೀಯ ಗಲಭೆ, ಬಾಂಬ್ ಸ್ಫೋಟಗಳು ಸಂಭವಿಸುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ. ಮಾತ್ರವಲ್ಲ, ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಮುಸಲ್ಮಾನರ ನಿಂದನೆ ಮಾಡಿರುವುದಾಗಿಯೂ ದೂರಿನಲ್ಲಿ ಆರೋಪಿಸಿದ್ದಾರೆ.
ಫೇಸ್ಬುಕ್ನಲ್ಲಿ ಮಾಡಿದ ಎಲ್ಲ ಪೋಸ್ಟ್ಗಳ ಪ್ರತಿಯೊಂದಿಗೆ ಆಸೀಫ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.