ಕಾಸರಗೋಡು, ಮೇ 03 (Daijiworld News/SM): ಎಪ್ರಿಲ್ 23ರಂದು ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ನಕಲಿ ಮತ ಚಲಾವಣೆಯಾಗಿರುವುದು ರಾಜಕೀಯ ವಲಯದಲ್ಲೇ ಸಂಚಲನಕ್ಕೆ ಕಾರಣವಾಗಿದ್ದು, ನಕಲಿ ಮತದಾನದ ಪುರಾವೆಗಳ ಸಹಿತ ಇದೀಗ ಹೊರಬರತೊಡಗಿದೆ.
ಸಿಪಿಎಂ ನಕಲಿ ಮತದಾನ ಮಾಡಿರುವುದಾಗಿ ಆರಂಭದಲ್ಲಿ ಕಾಂಗ್ರೆಸ್ ಪಕ್ಷವು ನಕಲಿ ಮತದಾನದ ಬಗ್ಗೆ ವಿಡಿಯೋ ದೃಶ್ಯಗಳ ಸಹಿತ ಬಹಿರಂಗಪಡಿಸಿತ್ತು . ಬಳಿಕ ಸಿಪಿಎಂ ಕೂಡಾ ಕಾಂಗ್ರೆಸ್ ವಿರುದ್ಧ ವಿಡಿಯೋ ದೃಶ್ಯಗಳನ್ನು ಮುಂದಿಟ್ಟು ಚುನಾವಣಾಧಿಕಾರಿಗೆ ದೂರು ನೀಡಿತ್ತು .
ತನಿಖೆ ನಡೆಯುತ್ತಿದ್ದಂತೆ ಕಲ್ಯಾಶ್ಯೇರಿ ಮತಗಟ್ಟೆಯಲ್ಲಿ ಮೂವರು ನಕಲಿ ಮತದಾನ ಮಾಡಿರುವುದು ತನಿಖೆಯಿಂದ ಸ್ಪಷ್ಟಗೊಂಡಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಟಿಕಾರಾಂ ಮೀನಾ ತಿಳಿಸಿದ್ದಾರೆ. ಮುಹಮ್ಮದ್ ಫಾಯಿಜ್, ಅಬ್ದುಲ್ ಸಮದ್, ಮುಹಮ್ಮದ್ ಕೆ.ಎಂ. ನಕಲಿ ಮತದಾನ ಮಾಡಿದ್ದಾರೆ.
ಆಶಿಕ್ ಕೆ.ಎಂ. ಎಂಬಾತನ ಬಗ್ಗೆ ಸಂಶಯಗಳಿದ್ದು, ಈತ ಹಲವು ಬಾರಿ ಮತಗಟ್ಟೆ ಬಳಿ ಸುತ್ತಾಡುತ್ತಿದ್ದ. ಈತ ನಕಲಿ ಮತದಾನ ಮಾಡಿದ್ದಾನೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಲ್ಯಾಶ್ಯೇರಿಯ 69 ಮತ್ತು 70 ನೇ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಸಂಬಂಧ ಪಟ್ಟಂತೆ ನಾಲ್ವರನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಮೂವರು ನಕಲಿ ಮತ ಗಳನ್ನು ಚಲಾಯಿಸಿರುವುದು ಸ್ಪಷ್ಟಗೊಂಡಿದೆ.
ಅಬ್ದುಲ್ ಸಮದ್ ಎರಡು ಮತ, ಮುಹಮ್ಮದ್ ಫಾಯಿಜ್ ತನ್ನ ಮತ ಸೇರಿದಂತೆ ಮೂರು ಮತಗಳನ್ನು ಚಲಾಯಿಸಿದ್ದಾನೆ. ಮುಹಮ್ಮದ್ ಕೆ.ಎಂ. ಮೂರು ಮತಗಳನ್ನು ಚಲಾಯಿಸಿರುವುದು ಸ್ಪಷ್ಟಗೊಂಡಿದೆ ಎಂದು ಚುನಾವಣಾ ಆಯುಕ್ತ ಟಿಕಾರಾಂ ಮೀನಾ ತಿಳಿಸಿದ್ದಾರೆ.
ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗದ ಅಬ್ದುಲ್ ಸಮದ್ ವಿರುದ್ಧ ವಾರಂಟ್ ಹೊರಡಿಸಲಾಗುವುದು ಎಂದು ತಿಳಿದುಬಂದಿದೆ. ಜಿಲ್ಲಾಧಿಕಾರಿ, ಸಹಾಯಕ ಚುನಾವಣಾ ಆಯುಕ್ತ, ಸೆಕ್ಟರಲ್ ಅಧಿಕಾರಿ ಮೊದಲಾದವರ ವರದಿಯಂತೆ ನಕಲಿ ಮತ ಖಚಿತ ಪಡಿಸಲಾಗಿದೆ. ಆದರೆ ಮತದಾನದ ಸಂದರ್ಭದಲ್ಲಿ ನಕಲಿ ಮತ ಚಲಾಯಿಸಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಚಾರಣೆ ಸಂದರ್ಭದಲ್ಲಿ ಹೇಳಿರುವುದಾಗಿ ಮೀನಾ ತಿಳಿಸಿದ್ದಾರೆ.
ನಕಲಿ ಮತದಾನ ನಡೆಸಿದವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು. ಇನ್ನೂ ಹಲವು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದ ಬಗ್ಗೆ ದೂರುಗಳು ಬಂದಿದ್ದು, ತನಿಖೆ ನಡೆಯುತ್ತಿದೆ. ಅಧಿಕಾರಿಗಳು ತಪ್ಪಿತಸ್ಥರಾದರೆ ಅವರ ವಿರುದ್ದವೂ ಕ್ರಮ ತೆಗೆದುಕೊಳ್ಳಲಾಗುವುದು. ಏಳು ದಿನಗಳೊಳಗೆ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.