ಕುಂದಾಪುರ, ಮೇ 03 (Daijiworld News/MSP): ಮದುವೆ ಎಂದಾಕ್ಷಣ ನೆನಪಾಗೋದು ಅದ್ದೂರಿ ಸಿಂಗಾರದ ಮಂಟಪ, ಒಂದಿಷ್ಟು ಆಡಂಬರದಲ್ಲಿ ಅತ್ತಿತ್ತಾ ತಿರುಗುವ ಗಂಡು ಮತ್ತು ಹೆಣ್ಣಿನ ಕಡೆಯವರ ಸಂಭ್ರಮ. ಆದರೆ ಇಲ್ಲಿ ನಡೆದಿರೋ ಮದುವೆಯಲ್ಲಿ ಇವೇಲ್ಲದ್ರ ಜೊತೆಗೆ ಸ್ಥಳೀಯ ಭಾಷೆಯ ನೆಲದ ಸಂಸ್ಕೃತಿಯ ಜೊತೆಗೆ ಜನಪದ ಪರಿಕರಗಳ ಪ್ರದರ್ಶನ ವಿಶೇಶ ರಂಗು ಮೂಡಿಸಿತ್ತು.ಮದುವೆಗೆ ಬಂದವರು ಮದುವೆಯನ್ನು ಮರೆಯಲಾಗದಂತೆ ಮಾಡಿದಂತಹ ಮದುವೆ.
ಇದು ವಿನೂತನವಾದ ರೀತಿಯಲ್ಲಿ ನಡೆದ ಮದುವೆ. ಕುಂದಾಪುರ ತಾಲೂಕು ಕೆಂಚನೂರು ಗಣೇಶ್ ಮತ್ತು ಪೂರ್ಣಿಮಾ ಅವರು ಎಲ್ಲರಿಗಿಂತ ವಿಶೇಷವಾಗಿ ಮದುವೆಯಾಗಬೇಕು ಅಂತಾ ಅಂದ್ಕೊಂಡಿದ್ರು. ಇವರ ಯೋಚನೆಯಂತೆ ನಡೆದ ವಿಶೇಷ ಮದುವೆ ಸಾಂಪ್ರದಾಯಿಕ ಸೊಗಡನ್ನು ಮತ್ತೆ ನೆನಪು ಮಾಡಿಕೊಟ್ಟಿತು .ತಲ್ಲೂರಿ ಶೇಷಕೃಷ್ಣ ಸಭಾಭವನದಲ್ಲಿ ನಡೆದ ಈ ಮದುವೆ ಸಾವಿರಾರು ಜನರ ಸಮ್ಮೀಳಿತದೊಂದಿಗೆ ಅಪರೂಪದ ಮದುವೆಯಾಗಿ ಮೂಡಿಬಂತು.
ಗ್ರಾಮೀಣ ಸೊಗಡಿನ ಹಳೆಯ ಕಾಲದ ವಸ್ತುಗಳ ಪ್ರದರ್ಶನ ಜನಪದ ಸಂಸ್ಕ್ರತಿಯನ್ನು ಮೆಲುಕು ಹಾಕುವಂತೆ ಮಾಡಿತ್ತು. ಹುಡುಗ ಮತ್ತು ಹುಡುಗಿ ಮನೆಯವರ ಅಂತ್ಯಕ್ಷರಿ ಸ್ಪರ್ಧೆ, ಶೋಭಾನೆ ಗೀತೆಗಳು ಮದುವೆಗೆ ಬಂದವರನ್ನು ಸಾಕಷ್ಡು ರಂಜಿಸಿತ್ತು. ಯಾಂತ್ರೀಕೃತ ಬದುಕಿನಿಂದಾಗಿ ನಶಿಸುತ್ತಿರುವ ಜಮಾನದಲ್ಲಿ ಗ್ರಾಮೀಣ ಸೊಗಡಿನ ಪರಿಕರಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯ ನೀಡಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಕ ಶ್ರೀನಿವಾಸ ಸೂರ್ಗೋಳಿ ಅವರು ಸಂಗ್ರಹಿಸಿದ್ದ ಅನ್ನದ ಚಟ್ಟಿ, ಅನ್ನದ ಸಿಬ್ಬಲು, ಚರಕ, ಕೈಮರ್ಗಿ, ಯಕ್ಷಗಾನ ಕಿರೀಟ, ಕಸೆ ಸೀರೆ ಮೊದಲಾದ ೨೪೦ಕ್ಕೂ ಮಿಕ್ಕಿದ ಪರಿಕರಗಳ ಪ್ರದರ್ಶನಕ್ಕೆ ಯುವ ಜನತೆ ಫಿದಾ ಆದ್ರು. ಗಂಡು ಹೆಣ್ಣಿನಕಡೆಯವರ ನಡುವಿನ ಅಂತ್ಯಾಕ್ಷರಿ, ಸಾಂಪ್ರಾಯಿಕ ಶೋಭಾನೆ ಹಾಡು ಹಾಡುವ ಸ್ಪರ್ಧೆ ಆಮಂತ್ರಿತರಿಗೆ ಬಹಳಷ್ಟು ಖುಷಿ ಕೊಟ್ಟಿತ್ತು.
ಮದುವೆ ಗೆ ಬಂದವರಿಗೆ ಊಟವೂ ಕೂಡಾ ಡಿಫರೆಂಟ್ ಆಗಿರಬೇಕು ಅನ್ನೋದು ವಧು ವರರ ಯೋಚನೆಯಾಗಿತ್ತು. ಪಕ್ಕಾ ದೇಸಿ ಶೈಲಿಯ ಕುಂದಾಪುರ ಗ್ರಾಮೀಣ ಭಾಗದ ಊಟ-ಉಪಹಾರ, ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆ ಉಪಹಾರಕ್ಕೆ ಹಳ್ಳಿ ಶೈಲಿಯ ಜ್ಯೂಸ್, ಗೋಲಿ ಸೋಡ ಮಜ್ಜಿಗೆ, ಕಾಶ್ಮೀರಿ ಟೀ, ಸಕ್ಕರೆ ಪೀಪಿ, ಬೆಂಕಿ ಬೀಡಾ, ಬಾಳೆಹಣ್ಣು ವ್ಯವಸ್ಥೆ ಇದ್ದರೆ, ಮಧ್ಯಾಹ್ನದ ಊಟಕ್ಕೆ ಗೇರು ಹಣ್ಣಿನ ಹುಳಿ, ಕಾಮಧೇನು ಮೊಸರು, ಖಾರದ ಹಪ್ಪಳ, ಶೇಂಗಾ ಕೊಸಂಬರಿ ಐಟಂಗಳು ಹೊಟ್ಟೆ ತಣ್ಣಗಾಗಿಸಿತು. ವಿಶೇಷವಾಗಿ ಮದುವೆಗೆ ಬಂದವರಿಗೆ ಬಳೆ ತೊಡಲು ಉಚಿತ ಬಳೆ ಇರುವ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಮದುವೆ ಬಂದ ಮಹಿಳೆಯರು ಬಣ್ಣ ಬಣ್ಣದ ಬಳೆ ತೊಟ್ಟು, ಹೂವು ಮುಡಿಯುವವರಿಗೆ ನೀಡಲಾದ ಮಲ್ಲಿಗೆ ಹೂವು ಮುಡಿದು ಸಂಭ್ರಮಿಸಿದ್ರು. ಮದುವೆಯಲ್ಲಿ ಪುಸ್ತಕದ ಅಂಗಡಿ ಜೊತೆಗೆ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಕೂಡ ಏರ್ಪಡಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಮದುವೆಗೆ ಬಂದವರಿಗೆ ಮತದಾನದ ಶಾಯಿ ಗುರುತು ತೋರಿಸಿ 250 ರೂಪಾಯಿ ಮೌಲ್ಯದ ಪುಸ್ತಕವನ್ನು ನೀಡುವ ವ್ಯವಸ್ಥೆ ಮಾಡಿದ್ದು ಪುಸ್ತಕ ಪ್ರಿಯರಿಗೆ ಖುಷಿ ಕೊಡ್ತು.