ಉಡುಪಿ, ಮೇ 03 (Daijiworld News/MSP): ಉಡುಪಿಯ ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ ಏಳು ಮಂದಿ ಮೀನುಗಾರರು ಡಿ.13 ರಂದು ನಿಗೂಢವಾಗಿ ನಾಪತ್ತೆಯಾಗಿತ್ತು. ಘಟನೆ ನಡೆದು ಸುಮಾರು ನಾಲ್ಕು ತಿಂಗಳ ಬಳಿಕ ಬೋಟ್ ನ ಅವಶೇಷಗಳು ಪತ್ತೆ ಆಗಿದೆ. ಮಹಾರಾಷ್ಟ್ರದ ಮಾಲ್ವಾಣ್ ಕಡಲ ತೀರದಿಂದ 33ಕಿ. ಮೀ. ದೂರ, 64ಮೀ. ಆಳದಲ್ಲಿ ಸುವರ್ಣ ತ್ರಿಭುಜ ದೋಣಿಯ ಅವಶೇಷಗಳು ಮೇ 1ರಂದು ಪತ್ತೆಯಾಗಿದ್ದು ಮೀನುಗಾರರು, ನೌಕಾ ಪಡೆ ಅಧಿಕಾರಿಗಳು ಇದು ಸುವರ್ಣ ತ್ರಿಭುಜ ಬೋಟ್ ನದ್ದೇ ಎಂದು ದೃಢಪಡಿಸಿದ್ದಾರೆ.
ಬೋಟ್ ಅವಶೇಷ ಪತ್ತೆ ಬಗ್ಗೆ ಸಾಯಿ ರಾಧಾ ಹೆಲ್ತ್ ರೆಸಾರ್ಟ್ ನಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಮೈತ್ರಿ ಪಕ್ಷದ ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದು, " ಭಾರತೀಯ ನೌಕಾಸೇನೆಯ ನೌಕೆಯೇ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ದೋಣಿಗೆ ಡಿಕ್ಕಿ ಹೊಡೆದು ಮೀನುಗಾರರನ್ನು ಹತ್ಯೆ" ಮಾಡಿದೆ ಎಂದಿದ್ದಾರೆ.
ಅಂದು ಇದನ್ನೇ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಸತ್ಯಾಂಶ ಹೊರ ಬರಲು ನ್ಯಾಯಾಂಗ ತನಿಖೆಯಾಗಬೇಕು. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ಪ್ರಮೋದ್ ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು ಏಳು ಮೃತ ಮೀನುಗಾರರ ಕುಟುಂಬಕ್ಕೆ ಕನಿಷ್ಟ 10 ಲಕ್ಷ ಪರಿಹಾರ ನೀಡಬೇಕು. ಬಿಜೆಪಿಯವರು ನಾಪತ್ತೆ ಆದ ಮೀನುಗಾರರ ಹೆಣದ ಮೇಲೂ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದ ನೌಕಾಪಡೆಯನ್ನು ಈ ಪ್ರಕರಣದಲ್ಲಿ ಜವಬ್ಧಾರಿಯನ್ನಾಗಿಸಿ ಸೂಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.