ಉಡುಪಿ, ಮೇ03(Daijiworld News/SS): ಸುವರ್ಣ ತ್ರಿಭುಜದಲ್ಲಿದ್ದ ಮೀನುಗಾರರು ಬದುಕುಳಿಯುವ ಯಾವುದೇ ಅವಕಾಶಗಳೂ ಅಲ್ಲಿಲ್ಲ ಎಂದು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮುದ್ರದಲ್ಲಿ ಸುವರ್ಣ ತ್ರಿಭುಜ ದೋಣಿಯ ಅವಶೇಷಗಳು ಪತ್ತೆಯಾಗಿವೆ. ಕಾರ್ಯಾಚರಣೆಯನ್ನು ವೀಕ್ಷಿಸಲು ನನ್ನನ್ನು ಹಾಗೂ ಮೀನುಗಾರರ 9 ಮಂದಿ ಮುಖಂಡರನ್ನು ನೌಕಾಪಡೆಯ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಸುಮಾರು 5 ದಿನ ಸಮುದ್ರದಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸಮುದ್ರದಲ್ಲಿ ಪೂರ್ತಿ ಕಾರ್ಯಾಚರಣೆಯ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ದೋಣಿಯ ಅವಶೇಷಗಳನ್ನು ನಾವು ಸ್ವತಃ ನೋಡಿದ್ದೇವೆ. ಅವು ಕಂಡಲ್ಲೇ ನಾವಿದ್ದ ದೋಣಿಯನ್ನು ನಿಲ್ಲಿಸಿ ನೌಕಾಪಡೆಯ ಮುಳುಗು ತಜ್ಞರನ್ನು ಕೆಳಗಿಳಿಸಲಾಯಿತು. ಮೀನುಗಾರರ ಸಮ್ಮುಖದಲ್ಲೇ ಹುಡುಕಾಟ ಮಾಡಿದ್ದರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಹೇಳಿದರು.
ನೌಕಾಪಡೆಯ ನುರಿತ ಕ್ಯಾಪ್ಟನ್ಗಳ ಸಮ್ಮುಖದಲ್ಲಿ, ಶಬ್ದದ ಕಂಪನ ಆಧರಿಸಿದ ಸೋನಾರ್ ತಂತ್ರಜ್ಞಾನ ಬಳಸಿ ಶೋಧ ಕಾರ್ಯ ನಡೆಸಲಾಯಿತು. ಕೇವಲ ಬೋಟ್ ಅವಶೇಷಗಳು ಪತ್ತೆಯಾಗಿದೆ. ಆದರೆ ಈ ದೋಣಿಯಲ್ಲಿದ್ದ ಮೀನುಗಾರರು ಬದುಕಿ ಉಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಿದರು.
ಇದೇ ವೇಳೆ, ದೋಣಿಯಲ್ಲಿದ್ದ 7 ಮೀನುಗಾರರ ಕುಟುಂಬಗಳಿಗೆ ದೊಡ್ಡ ರೀತಿಯ ಪರಿಹಾರ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.