ಮಂಗಳೂರು, ಮೇ 03 (Daijiworld News/MSP): ಕಳೆದ ಮುಂಗಾರಿನಲ್ಲಿ ಜೆಲ್ಲೆಯ ಹಲವೆಡೆ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ಗಮನದಲ್ಲಿ ಇರಿಸಿಕೊಂಡು ಪ್ರಸಕ್ತ ಸಾಲಿನಲ್ಲಿ ಪ್ರಾಕೃತಿಕ ವಿಕೋಪವನ್ನು ನಿಭಾಯಿಸಲು ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳೀಯವಾಗಿ ಯೋಜನೆ ರೂಪಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಬಂಧಪಟ್ಟ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತ ಕಂಟ್ರೋಲ್ ರೂಂ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು , ಕಳೆದ ವರ್ಷದ ವಿಕೋಪವನ್ನು ಗಮನದಲ್ಲಿರಿಸಿ ತಾಲ್ಲೂಕು ಮಟ್ಟದಲ್ಲಿ ಒಳ್ಳೆಯ ಕೆಲಸಗಾರರನ್ನು ಒಳಗೊಂಡ ತಂಡ ಕಟ್ಟಬೇಕು. ಕಂಟ್ರೋಲ್ ರೂಂ ಮೂಲಕವೇ ಅಗತ್ಯ ಇರುವ ಕಡೆ ತಲುಪಲು ಸಾಧ್ಯವಾಗುವಂತೆ ನೆಟ್ವರ್ಕ್ ನಿರ್ಮಿಸುವಂತೆ ಎಂದು ತಹಶೀಲ್ದಾರರಿಗೆ ಸಲಹೆ ನೀಡಿದರು.
ಅನಾಹುತ ಸಂಭವಿಸಿದ ಕಡೆ ಒಬ್ಬರೇ ಓಡದೇ, ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಮುಖ್ಯವಾಗಿ ಅಗ್ನಿಶಾಮಕ, ಪೊಲೀಸ್ ಮತ್ತು ಇತರ ಸಂಬಂಧಪಟ್ಟವರನ್ನು ಒಳಗೊಂಡಂತೆ ತಾಲ್ಲೂಕು ಮಟ್ಟದಲ್ಲಿ ತಂಡವನ್ನು ರಚಿಸಬೇಕು. ತಾಲ್ಲೂಕಿನ ಚರಿತ್ರೆಯನ್ನು ಮನನ ಮಾಡಿಕೊಳ್ಳಬೇಕು. ಎಲ್ಲಿ ನೆರೆ ಸಂಭವಿಸಲಿದೆ, ಭೂಮಿ ಕುಸಿಯಲಿದೆ, ಕಡಲ್ಕೊರೆತ ಸಂಭವಿಸಲಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಮುಚ್ಚಿರುವ ನಾಲಾಗಳನ್ನು ತೆರವುಗೊಳಿಸಿ, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಇದರಿಂದ ನಗರದಲ್ಲಿ ಕೃತಕ ನೆರೆಗೆ ಅವಕಾಶ ಇರುವುದಿಲ್ಲ. ಈ ಕೆಲಸಗಳು ಶೀಘ್ರವಾಗಿ ಮುಗಿಯಬೇಕು. ಈ ಮಾದರಿಯ ಕೆಲಸಗಳಿಗೆ ಟೆಂಡರ್ ಕರೆಯಲು ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಜಿಲ್ಲೆಯ ಅಗ್ನಿಶಾಮಕ ದಳ ಈಗಾಗಲೇ ಅಗತ್ಯ ಸಲಕರಣೆಗಳೊಂದಿಗೆ ಮಳೆಗಾಲವನ್ನು ಎದುರಿಸಲು ಸಜ್ಜಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದರು.
ಶಾಲೆಗೆ ರಜೆ - ತಹಶೀಲ್ದಾರ ಜವಬ್ದಾರಿ
ಮಳೆಗಾಲದಲ್ಲಿ ಸ್ಥಳೀಯ ಮಕ್ಕಳ ಸುರಕ್ಷೆಯನ್ನು ಗಮನದಲ್ಲಿ ಇಟ್ಟುಕೊಂಡು, ತಹಶೀಲ್ದಾರರು ಡಿಡಿಪಿಐ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಮಾಲೋಚಿಸಿ, ರಜೆ ನೀಡಬಹುದು ಎಂದು ತಿಳಿಸಿದರು. ಮಾತ್ರವಲ್ಲದೆ ಶಿರಾಡಿ ಚಾರ್ಮಾಡಿಯಲ್ಲಿ ಗುಡ್ಡ ಕುಸಿತ ಮತ್ತಿತರ ಸಮಸ್ಯೆ ಎದುರಿಸಲು ಗಸ್ತು ವಾಹನವೊಂದನ್ನು ನಿಯೋಜಿಸಲು ಸೂಚಿಸಿದ್ದಾರೆ. ಗುಡ್ಡ ಕುಸಿತಗಳು ಸಂಭವಿಸಿದರೆ ತುರ್ತು ನೆರವಿಗೆ ಸಜ್ಜಾಗಬೇಕು ಎಂದು ಪುತ್ತೂರು ಮತ್ತು ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣ ಮೂರ್ತಿ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.